ಅಧ್ಯಕ್ಷ ಜನರಲ್ ಪರ್ವೇಜ್ ಮುಶರ್ರಫ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮರು-ಆಯ್ಕೆಯಾಗಲು ಸಂಪೂರ್ಣವಾಗಿ ಅರ್ಹರಾಗಿದ್ದರು. ಹೀಗಾಗಿ ಅಕ್ಟೋಬರ್ 6 ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಮುಶರ್ರಫ್ ಅವರ ಅಭ್ಯರ್ಥಿತನದ ಅನರ್ಹತೆ ಕುರಿತು ಸುಪ್ರೀಮ್ ಕೋರ್ಟ್ ನೀಡುವ ಯಾವುದೇ ತೀರ್ಪು ಅವರಿಗೆ ಹಿನ್ನಡೆಯುಂಟು ಮಾಡಲಾರದು ಎಂದು ಸರಕಾರದ ಹಿರಿಯ ನ್ಯಾಯವಾದಿಗಳೊಬ್ಬರು ತಿಳಿಸಿದ್ದಾರೆ.
ಹನ್ನೊಂದು ನ್ಯಾಯಮೂರ್ತಿಗಳ ಪೀಠದ ಮುಂದೆ ತಮ್ಮ ವಾದವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಮಲಿಕ್ ಖಯ್ಯಾಮ್ ಅವರು, ಈ ಸಂಬಂಧ ಸುಪ್ರೀಮ್ ಕೋರ್ಟ್ ನೀಡುವ ಯಾವುದೇ ನಿರ್ಣಯವು ಭವಿಷ್ಯದಲ್ಲಿ ಮಾತ್ರ ಅನ್ವಯವಾಗುತ್ತದೆ ಎಂದರು.
ಸೇನಾ ಮುಖ್ಯಸ್ಥನಾಗಿದ್ದುಕೊಂಡೇ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಶರ್ರಫ್ ಅವರು ಸ್ಪರ್ಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಸುಪ್ರಿಮ್ ಕೋರ್ಟಿನಲ್ಲಿ ಮನವಿಯನ್ನು ದಾಖಲಿಸಲಾಗಿತ್ತು. ಸುಪ್ರೀಮ್ ಕೋರ್ಟ್ ಹನ್ನೊಂದು ಸದಸ್ಯರುಗಳ ಪೀಠ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಜನರಲ್ ಪರ್ವೇಜ್ ಮುಶರ್ರಫ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಅಲ್ಲದೇ ನವೆಂಬರ್ 15ರ ವರೆಗೆ ಸೇನಾ ಮುಖ್ಯಸ್ಥನಾಗಿ ಮುಂದುವರಿಯಲು ಸಂವಿಧಾನದ ತಿದ್ದುಪಡಿ ಅನುವು ಮಾಡಿಕೊಟ್ಟಿದೆ ಎಂದು ನ್ಯಾಯವಾದಿಗಳು ಪ್ರತಿಪಾದಿಸಿದರು.
|