ಅಮೆರಿಕ-ಭಾರತ ನಾಗರಿಕ ಸಹಕಾರ ಅಣು ಒಪ್ಪಂದ ಸಂಬಂಧ ಭಾರತದ ನಂಬಿಕೆಯ ಕುರಿತು ತಪ್ಪು ಅಭಿಪ್ರಾಯಪಡುವ ಅಗತ್ಯವಿಲ್ಲ ಎಂದಿರುವ ಪ್ರಧಾನಿ ಡಾ. ಮನಮೋಹನ್ ಸಿಂಗ್, ಭಾರತ ನಂಬಿಗಸ್ಥ ರಾಷ್ಟ್ರವಾಗಿದೆ ಮತ್ತು ತನ್ನ ಅಂತಾರಾಷ್ಟ್ರೀಯ ಬದ್ಧತೆಗಳಿಂದ ಅದು ಯಾವತ್ತೂ ಹಿಂದೆ ಸರಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
"ವ್ಯಾಪಾರ ಅಥವಾ ಬದಲಾಗುತ್ತಿರುವ ಹವಾಮಾನ ಒಪ್ಪಂದವಾಗಿರಲಿ ಅಥವಾ ಇನ್ನಾವುದೇ ಅಂತಾರಾಷ್ಟ್ರೀಯ ಜವಾಬ್ದಾರಿಯಿಂದ ನುಣಿಚಿಕೊಳ್ಳುವುದಿಲ್ಲ. ಭಾರತ ಯಾವಾಗಲೂ ಅಂತಾರಾಷ್ಟ್ರೀಯ ಸಮುದಾಯದ ಜತೆಗೆ ಹೆಜ್ಜೆ ಹಾಕುತ್ತದೆ" ಎಂದು ನವದೆಹಲಿಯಲ್ಲಿ ಫಾರ್ಚುನ್ ಗ್ಲೋಬಲ್ ವೇದಿಕೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಡಾ. ಮನಮೋಹನ್ ಸಿಂಗ್ ಅವರು ಹೇಳಿದರು.
ಅಣು ಒಪ್ಪಂದ ಜಾರಿ ಕುರಿತು ಸರಕಾರ ಮತ್ತು ಎಡಪಕ್ಷಗಳ ನಡುವಿನ ವಿವಾದ ತಾರಕಕ್ಕೇರಿರುವ ನಡುವೆಯೇ ಪ್ರಧಾನಿಯವರ ಈ ಹೇಳಿಕೆಯು ತುಂಬಾ ಮಹತ್ವ ಪಡೆದುಕೊಂಡಿದೆ.
"ತನ್ನ ಅಂತಾರಾಷ್ಟ್ರೀಯ ಬದ್ಧತೆಯಿಂದ ಭಾರತ ಹಿಂದೆ ಸರಿಯುವುದಿಲ್ಲ. ಅಂತಾರಾಷ್ಟ್ರೀಯ ನಾಗರಿಕನಿಗೆ ಜವಾಬ್ದಾರನಾಗಿದ್ದುಕೊಂಡಿರುವ ಭಾರತ ತುಂಬ ನಂಬಿಗಸ್ಥ ರಾಷ್ಟ್ರವಾಗಿದೆ. ಎಲ್ಲ ಕಾನೂನುಗಳನ್ನು ಭಾರತ ಗೌರವಿಸುತ್ತದೆ. ಹೀಗಾಗಿಯೇ ಭಾರತವನ್ನು ಅತ್ಯಂತ ನಂಬಿಗಸ್ಥ ಸಂಗಾತಿ" ಎಂದು ಕರೆಯಬಹುದು ಎಂದು ಪ್ರಧಾನಿ ವಿವರಿಸಿದರು.
|