ಎಂಟೇ ನಿಮಿಷದಲ್ಲಿ 103 ಹ್ಯಾಂಬರ್ಗರ್‌ಗಳನ್ನು ಗುಳುಂ ಮಾಡಿರುವ ಅಮೆರಿಕದ ತಿಂಡಿಪೋತನೊಬ್ಬ ಹೊಸ ದಾಖಲೆ ಸೃಷ್ಟಿಸಿದ್ದಾನೆ.
ಟೆನ್ನಿಸ್ಸೀಯಲ್ಲಿ ನಡೆದ ವಿಶ್ವ ಹ್ಯಾಂಬರ್ಗರ್ ಸೇವನೆ ಚಾಂಪಿಯನ್‌ಶಿಪ್ ಕೂಟದಲ್ಲಿ ಜೋಯ್ ಚೆಸ್ಟ್‌ನಟ್ ಎಂಬ ಯುವಕ ಇತರ 12 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಕ್ರಿಸ್ಟಲ್ ಸ್ಕ್ವೇರ್ ಪ್ರಶಸ್ತಿ "ಗುಳುಂ" ಮಾಡಿದ್ದಾನೆ.
ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್‌ನವನಾದ ಈ 23ರ ಹರೆಯದ ಯುವಕ, ಕಳೆದ ಕ್ರಿಸ್ಟಲ್ ಸ್ವೇರ್ ಚಾಂಪಿಯನ್‌ಶಿಪ್‌ನಲ್ಲಿ 97 ಕ್ರಿಸ್ಟಲ್‌ಗಳನ್ನು (ಹ್ಯಾಂಬರ್ಗರ್‌ನ ಒಂದು ಬ್ರ್ಯಾಂಡ್ ಹೆಸರು) ನುಂಗಿ ಜಪಾನಿನ ತಕೆರು ಕೊಬಯಶಿ ಎಂಬಾತ ಮಾಡಿದ್ದ ದಾಖಲೆಯನ್ನು ಮುರಿದಿದ್ದಾನೆ.
2004ರಲ್ಲಿ ಕ್ರಿಸ್ಟಲ್ ಸ್ವೇರ್ ಸ್ಪರ್ಧಾಕೂಟ ಆರಂಭಿಸುವಾಗ ಯಾರು ಕೂಡ ಶತಕ ದಾಟುವುದು ಬಿಡಿ, ಅದರ ಸಮೀಪವೂ ಸುಳಿಯಲಾರರು ಎಂದು ನಾವು ಭಾವಿಸಿದ್ದೆವು ಎಂದು ಕ್ರಿಸ್ಟಲ್ ಕಂಪನಿಯ ಮಾರುಕಟ್ಟೆ ವಿಭಾಗದ ಅಧಿಕಾರಿ ಬ್ರಾಡ್ ವಾಲ್ ಅಚ್ಚರಿಯಿಂದ ನುಡಿದಿದ್ದಾರೆ.
ಜೋಯ್ ಚೆಸ್ಟ್‌ನಟ್ ಸ್ಥಾಪಿಸಿದ ದಾಖಲೆ, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ ಎಂದಿದ್ದಾರೆ ಅವರು.
ಚೆಸ್ಟ್‌ನಟ್‌ಗೆ ಬಹುಮಾನದ ಮೊತ್ತವಾಗಿ 5000 ಪೌಂಡ್ ನೀಡಲಾಯಿತು.
|