ಸೇನೆಯಲ್ಲಿ ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಬರ್ಮದ ಸೇನೆಯು 10ವರ್ಷಕ್ಕಿಂತ ಕೆಳಗಿನ ಪ್ರಾಯದ ಸಾವಿರಾರು ಮಕ್ಕಳನ್ನು ಅಪಹರಿಸಿ ಸೇನೆಗೆ ಬಲವಂತವಾಗಿ ಸೇರಿಸಿಕೊಂಡಿದೆ ಎಂಬ ಆಘಾತಕಾರಿ ಅಂಶವನ್ನು ಮಾನವ ಹಕ್ಕುಗಳ ಸಂಘಟನೆಯೊಂದು ಬಹಿರಂಗಪಡಿಸಿದೆ.
ಬರ್ಮದ ಮಿಲಿಟರಿ ಸರ್ಕಾರದ ನಿರ್ದಯತೆಯು ಶಾಂತಿಯುತ ಪ್ರತಿಭಟನೆಕಾರರ ಮೇಲೆ ಹಿಂಸಾಚಾರದ ದಾಳಿಯನ್ನು ಮೀರಿಸುತ್ತದೆ ಎಂದು ಮಾನವ ಹಕ್ಕು ಸಂಘಟನೆ ಹೇಳಿದೆ. ಬರ್ಮದ ಸೇನಾ ಪಡೆಯ ಕೊರತೆಯನ್ನು ನೀಗಿಸಲು ಮಿಲಿಟರಿ ನೇಮಕಾತಿ ಸಂಸ್ಥೆಯು ಮಕ್ಕಳನ್ನು ಖರೀದಿಸುವ ಮತ್ತು ಮಾರುವ ವ್ಯವಹಾರದಲ್ಲಿ ನಿರತವಾಗಿದೆ ಎಂದು ಮಾನವ ಹಕ್ಕುಗಳ ಕಾವಲು ಸಂಘಟನೆಯ ಜೋಯ್ ಬೆಕರ್ ಹೇಳಿಕೆಯನ್ನು ಉಲ್ಲೇಖಿಸಿ ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.
ಸೈನ್ಯಕ್ಕೆ ಸೇರಿರುವ ಅನೇಕ ಮಂದಿ ಬಾಲಯೋಧರ ಸಂದರ್ಶನ ಮಾಡಿರುವುದಾಗಿ ಹೇಳಿರುವ ಸಂಘಟನೆ, ಮಕ್ಕಳನ್ನು ರೈಲು ನಿಲ್ದಾಣಗಳಲ್ಲಿ, ಬಲ್ ನಿಲ್ದಾಣಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಸಂಧಿಸಿ ಸೇನೆಗೆ ಸೇರದಿದ್ದರೆ ಅವರನ್ನು ಬಂಧಿಸುವುದಾಗಿ ಹೆದರಿಸಲಾಗುತ್ತಿತ್ತೆಂದು ಹೇಳಲಾಗಿದೆ. ಕೆಲವು ಮಕ್ಕಳನ್ನು ಸ್ವಯಂಸ್ಫೂರ್ತಿಯಿಂದ ಸೇನೆಗೆ ಸೇರುವವರೆಗೆ ಥಳಿಸಲಾಗುತ್ತಿತ್ತೆಂದು ಸಂಘಟನೆ ತಿಳಿಸಿದೆ.
ಬಾಲಯೋಧರನ್ನು ಕೆಲವುಬಾರಿ ಮಾನವ ಹಕ್ಕು ಉಲ್ಲಂಘನೆಗೆ ಬಲವಂತ ಮಾಡುತ್ತಿದ್ದರೆಂದು ಅದು ಹೇಳಿದೆ. ಗ್ರಾಮಗಳನ್ನು ಬೆಂಕಿಹಚ್ಚಿ ಸುಡುವಂತೆ ಮತ್ತು ನಾಗರಿಕರನ್ನು ಜೀತದ ದುಡಿಮೆಗೆ ಬಳಸುವಂತೆ ಅವರು ಒತ್ತಾಯಿಸುತ್ತಿದ್ದರೆಂದು ಸಂಘಟನೆ ದೂರಿದೆ. ತಪ್ಪಿಸಿಕೊಳ್ಳಲು ಯತ್ನಿಸುವ ಮಕ್ಕಳನ್ನು ಹಿಡಿದು ಥಳಿಸುತ್ತಿದ್ದಾರೆಂದೂ ಮತ್ತು ಕೂಡಿಹಾಕುತ್ತಿದ್ದರೆಂದೂ ಸಂಘಟನೆ ಹೇಳಿದೆ.
|