2004 ಮ್ಯಾಡ್ರಿಡ್ ರೈಲಿನ ಬಾಂಬ್ ಸ್ಫೋಟಗಳಲ್ಲಿ ತಪ್ಪಿತಸ್ಥರಾದ 21 ಜನರಲ್ಲಿ ಮೂರು ಮಂದಿಗೆ ಒಟ್ಟು 120, 755 ವರ್ಷಗಳ ಜೈಲುಶಿಕ್ಷೆಯನ್ನು ನೀಡಲಾಗಿದೆ. ಆದರೆ ಸ್ಪೇನ್ ಕಾನೂನಿನ ಪ್ರಕಾರ ಪ್ರತಿಯೊಬ್ಬರೂ ತಲಾ 40 ವರ್ಷಗಳ ಶಿಕ್ಷೆಯನ್ನು ಅನುಭವಿಸಲಿದ್ದಾರೆ. ಬಹುತೇಕ ಮೊರಕ್ಕೊಗಳಿದ್ದ ಒಟ್ಟು 28 ವ್ಯಕ್ತಿಗಳಲ್ಲಿ ಇನ್ನೂ ಕೆಲವು ಸ್ಪೇನಿನ ಪೌರರೂ ಸೇರಿದ್ದಾರೆ.
ಅವರ ಮೇಲೆ 191 ಜನರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದ ಆರೋಪವನ್ನು ಹೊರಿಸಲಾಗಿದೆ. ಮೊರಕ್ಕೊ ಪ್ರಜೆಯಾದ 32 ವರ್ಷದ ಓಥಮಾನ್ ಎಸ್ ನಾವಿಗೆ 42, 924 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದರೆ ಅವನ ಸಹಚರ 33 ವರ್ಷ ವಯಸ್ಸಿನ ಜಮಾಲ್ ಜಾಗಮ್‌ಗೆ 42,862 ವರ್ಷ ಶಿಕ್ಷೆ ವಿಧಿಸಲಾಗಿದೆ. ಸ್ಪೋಟಕಗಳನ್ನು ಪೂರೈಸಿದ ಸ್ಪೇನಿನ ಪ್ರಜೆ ಎಮಿಲಿಯೊ ಟ್ರಾಷೋರಾಸ್ 34,715 ವರ್ಷ ಶಿಕ್ಷೆ ಅನುಭವಿಸಬೇಕಾಗಿದೆ.
ಪ್ರತಿಯೊಬ್ಬರಿಗೂ 191 ಹತ್ಯೆಗಳಿಗಾಗಿ 30 ವರ್ಷಗಳ ಶಿಕ್ಷೆ, 1856 ಹತ್ಯೆ ಯತ್ನಗಳಿಗಾಗಿ 20 ವರ್ಷಗಳ ಶಿಕ್ಷೆ ಮತ್ತು ಭಯೋತ್ಪಾದನೆ ಸಂಘಟನೆ ಜತೆ ಅವರ ಸಹಯೋಗಕ್ಕಾಗಿ 12 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಗಳನ್ನು ಓದಿ ಹೇಳುತ್ತಿದ್ದಂತೆ ಅನೇಕ ಮಂದಿ ಕೈದಿಗಳು ವಿಶೇಷ ಗುಂಡು ನಿರೋಧಕ ಆವರಣದೊಳಗೆ ಶಿಕ್ಷೆಗಳನ್ನು ಕುರಿತು ವ್ಯಂಗ್ಯವಾಗಿ ಮಾತನಾಡಿಕೊಂಡರು. ಆದರೆ ರೈಲಿನಲ್ಲಿ ಬಾಂಬ್ ಹುದುಗಿಸಿಟ್ಟ ಜೌಗಮ್ ದಿವ್ಯ ಮೌನ ವಹಿಸಿದ್ದನು.
|