ಶ್ರೀಲಂಕಾದ ವಾಯುಪಡೆ ಶುಕ್ರವಾರ ಬೆಳಿಗ್ಗೆ ನಡೆಸಿದ ದಾಳಿಯಲ್ಲಿ ಎಲ್‌ಟಿಟಿಇಯ ರಾಜಕೀಯ ವಿಭಾಗದ ಮುಖಂಡ ತಮಿಳ್‌ಸೆಲ್ವನ್ ಸೇರಿದಂತೆ ಇನ್ನೂ ಐದು ಮಂದಿ ತಮಿಳು ಉಗ್ರರು ಹತರಾಗಿದ್ದಾರೆ,
" ಬೆಳಿಗ್ಗೆ 6 ಗಂಟೆಗೆ ನಮ್ಮ ಸಂಘಟನೆಯ ರಾಜಕೀಯ ದಳದ ಮುಖಂಡ ಬ್ರಿ.ಎ.ಪಿ. ತಮಿಳ್‌ಸೆಲ್ವನ್ ಶ್ರೀಲಂಕಾ ವಾಯುದಳದ ಬಾಂಬ್ ದಾಳಿಯಿಂದ ಮೃತಪಟ್ಟಿದ್ದಾರೆಂದು ತಮಿಳು ಈಳಂ ಜನರಿಗೆ,ವಿಶ್ವಾದ್ಯಂತ ವಾಸಿಸುವ ತಮಿಳು ಜನರಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯದವರಿಗೆ ಅತ್ಯಂತ ದುಃಖದಿಂದ ಪ್ರಕಟಿಸುತ್ತಿದ್ದೇವೆ" ಎಂದು ಎಲ್‌ಟಿಟಿಇ ಶಾಂತಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ತಮಿಳುಸೆಲ್ವಂ ಜತೆಗೆ ಲೆ.ಕರ್ನಲ್ ಅನ್ಪುಮಣಿ, ಮೇಜರ್ ಮಿಥುಹಾನ್, ಕ್ಯಾ.ನೆಥಗಿ, ಲೆ.ಅಡಚ್ಗಿವಲ್ ಮತ್ತು ಲೆ.ವಹಾಯ್‌ಕುಮಾರನ್ ಸತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಶ್ರೀಲಂಕಾ ವಾಯುಪಡೆಯ ಸೂಪರ್‌ಸಾನಿಕ್ ಫೈಟರ್‌ಜೆಟ್‌ಗಳು ಏಕಕಾಲದಲ್ಲಿ ಕಿಲ್ಲಿನೋಚಿಯ ಎಲ್‌ಟಿಟಿಇ ಮತ್ತು ಕಪ್ಪು ವ್ಯಾಘ್ರ ನೆಲೆಗಳ ಮೇಲೆ ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾಗಿ ಶ್ರೀಲಂಕಾ ರಕ್ಷಣಾ ಸಚಿವಾಲಯ ಹೇಳಿದೆ.
ಗುಪ್ತಚಾರ ಇಲಾಖೆಯ ಮಾಹಿತಿ ಮೇಲೆ ಮತ್ತು ಸತತ ವಾಯುದಳದ ಕಣ್ಗಾವಲಿನ ಬಳಿಕ ಬೆಳಿಗ್ಗೆ 6 ಗಂಟೆಗೆ ಈ ದಾಳಿ ನಡೆಯಿತೆಂದು ಅದು ಹೇಳಿದ್ದು ಸಾವುನೋವಿನ ವಿವರಗಳನ್ನು ನೀಡಿರಲಿಲ್ಲ. ವಾಯುದಾಳಿಯಿಂದ ಎಲ್‌ಟಿಟಿಇ ನಾಯಕರ ಅಡಗುದಾಣ ಎಂದು ನಂಬಲಾದ ಇರಾನಮಡುವಿನ ತರುಯಾಯುರುನ ನೆಲೆ ಮತ್ತು ಈಶಾನ್ಯಕ್ಕಿರುವ ಕಪ್ಪು ವ್ಯಾಘ್ರ ನೆಲೆ ಸಂಪೂರ್ಣ ನಾಶವಾಯಿತೆಂದು ಪೈಲಟ್‌ಗಳು ದೃಢಪಡಿಸಿದ್ದಾರೆ.
ಕಳೆದ ವಾರ 21 ಎಲ್‌ಟಿಟಿಇ ಆತ್ಮಹತ್ಯೆ ದಳದ ಕಾರ್ಯಕರ್ತರು ಅನುರಾಧಪುರದಲ್ಲಿರುವ ಮುಖ್ಯವಾಯುನೆಲೆ ಮೇಲೆ ಹಾನಿಕರ ದಾಳಿ ಮಾಡಿ ಕನಿಷ್ಠ 8 ವಿಮಾನಗಳನ್ನು ನಾಶ ಮಾಡಿತ್ತು. ಎಲ್‌ಟಿಟಿಇ ಕಮ್ಯಾಂಡೋ ಶೈಲಿಯ ದಾಳಿಯಿಂದ ತಮ್ಮ ಸಾಮರ್ಥ್ಯ ಕುಂದಿಲ್ಲ ಎಂದು ವಾಯುದಳ ತಿಳಿಸಿದೆ.
|