ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಕುರಿತು ನಿರ್ಧಾರ ಪ್ರಕಟಿಸಲು ಸುಪ್ರೀಂಕೋರ್ಟ್ ವಿಳಂಬ ಮಾಡಿದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ. ತುರ್ತು ಪರಿಸ್ಥಿತಿ ಬಗ್ಗೆ ಸರಕಾರವು ಈಗಾಗಲೇ ನಿರ್ಣಯ ತೆಗೆದುಕೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವ ಮೊದಲೇ ಅಥವಾ ನಂತರ- ಯಾವಾಗ ಹೇರಬೇಕು ಎಂಬುದರ ಕುರಿತು ಉನ್ನತ ಮಟ್ಟದಲ್ಲಿ ಸಮಾಲೋಚಿಸುತ್ತಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ದಿ ನೇಷನ್ ಪತ್ರಿಕೆ ವರದಿ ಮಾಡಿದೆ.
ಮುಷರಫ್ ಅವರ ಮರು ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಈ ಪ್ರಕರಣದ ಕುರಿತು ಸೋಮವಾರ ಮತ್ತು ಮಂಗಳವಾರ ಹಾಗೂ ಆ ಬಳಿಕ ನವೆಂಬರ್ 12ರಿಂದ 14ರವರೆಗೆ ವಿಚಾರಣೆ ನಡೆಸುವುದಾಗಿ ನಿರ್ಧರಿಸಿತ್ತು.
ಅತ್ಯಂತ ಕ್ಷಿಪ್ರವಾಗಿ ವಿಚಾರಣೆ ಮುಗಿಸುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶ ಜಾವೇದ್ ಇಕ್ಬಾರ್ ತಿಳಿಸಿದ್ದಾರೆ. ಇದೇ ಸಂದರ್ಭ ದೇಶದಲ್ಲಿ ಮಾರ್ಷಲ್ ಕಾನೂನು ಅಥವಾ ತುರ್ತು ಪರಿಸ್ಥಿತಿ ಹೇರುವ ಯಾವುದೇ ಉದ್ದೇಶ ಮುಷರಫ್‌ಗಿಲ್ಲ ಎಂದು ಅಟಾರ್ನಿ ಜನರಲ್ ಮಲಿಕ್ ಮುಹಮ್ಮದ್ ಖಯೂಮ್ ಅವರು ಸ್ಪಷ್ಟವಾಗಿ ಹೇಳಿದ್ದರು.
ಆದರೂ, ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ನವೆಂಬರ್ 15ರ ನಂತರ ಪ್ರಕಟಿಸಿದರೆ, ತುರ್ತುಸ್ಥಿತಿ ಹೇರಲು ಸರ್ವ ರೀತಿಯಲ್ಲೂ ಸರಕಾರ ಸಜ್ಜಾಗಿದೆ ಎಂದು ಪತ್ರಿಕೆ ತಿಳಿಸಿದೆ. ನವೆಂಬರ್ 15ರ ವೇಳೆಗೆ ಯಾವುದೇ ಚುನಾಯಿತ ಶಾಸನಸಭೆಗಳೂ ಇರುವುದಿಲ್ಲ ಮತ್ತು ಅಧ್ಯಕ್ಷ ಮುಷರಫ್ ಕೂಡ ಅವರ ಸಮವಸ್ತ್ರ ತೊರೆಯಬೇಕಾಗುತ್ತದೆ ಎಂಬುದೇ ಇದಕ್ಕೆ ಪ್ರಧಾನ ಕಾರಣ.
ಮುಷರಫ್ ಅವರ ಅಧಿಕಾರಾವಧಿ ಕೊನೆಗೊಂಡ ಬಳಿಕ, ಅಂದರೆ ಅವರೆದುರು ಅತ್ಯಂತ ಕಡಿಮೆ ಆಯ್ಕೆಗಳಿರುವ ನವೆಂಬರ್ 15ರಂದೇ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ ಎಂದು ಅಧಿಕೃತ ವಲಯಗಳು ನಂಬಿವೆ.
ಸುಪ್ರೀಂಕೋರ್ಟ್ ತೀರ್ಪು ಮುಷರಫ್ ವಿರುದ್ಧವೇ ಹೊರಬೀಳಲಿದ್ದು ಎಂಬ ಬಗ್ಗೆ ಮುಷರಫ್ ಆಪ್ತವಲಯದಲ್ಲಿ ಆತಂಕವಿದೆ. ತೀರ್ಪು ಪ್ರಕಟಿಸುವ ಮೊದಲೇ ತುರ್ತು ಪರಿಸ್ಥಿತಿ ಹೇರಲಾಗುತ್ತದೆ ಎಂದು ಮೂಲಗಳು ನಂಬಿವೆ.
ತುರ್ತು ಪರಿಸ್ಥಿತಿಯ ಮೊದಲ ಬಲಿಪಶು ಎಂದರೆ ಮುಂದಿನ ವರ್ಷದ ಜನವರಿ ವೇಳೆಗೆ ನಡೆಯಲಿರುವ ಮಹಾಚುನಾವಣೆಗಳು. ತುರ್ತು ಸ್ಥಿತಿ ಹೇರಿದ್ದೇ ಆದಲ್ಲಿ, ರಾಷ್ಟ್ರೀಯ ಅಸೆಂಬ್ಲಿಯ ಅಧಿಕಾರಾವಧಿ ವಿಸ್ತರಿಸಲಾಗುತ್ತದೆ ಮತ್ತು ದೇಶವು ಫೆಡರಲ್ ಸರಕಾರದ ನಿಯಂತ್ರಣದಲ್ಲಿ ಗವರ್ನರ್ ಆಡಳಿತದಡಿ ಬರುತ್ತದೆ. ಹಾಲಿ ಪ್ರಧಾನಿಯೇ ಮುಂದುವರಿಯುತ್ತಾರಾದರೂ ಪ್ರಾಂತೀಯ ಸರಕಾರಗಳು ವಿಸರ್ಜನೆಯಾಗುತ್ತವೆ.
ಆಯಾ ಪ್ರಾಂತ್ಯಗಳಲ್ಲಿ ಅಧಿಕಾರವೆಲ್ಲವೂ ರಾಜ್ಯಪಾಲರ ಕೈಗೆ ಹೋಗುತ್ತದೆ. ರಾಜಕೀಯ ಶಕ್ತಿಗಳು ಸಂಪೂರ್ಣವಾಗಿ ಮೂಲೆಗುಂಪಾಗುತ್ತವೆ.
|