ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರಿಗೆ ತಾಲಿಬಾನ್ ಪಡೆಯ ಪ್ರಮುಖ ನಾಯಕ ಮೌಲಿ ಫಕೀರ್ ಮೊಹಮದ್ ಹತ್ಯೆ ಬೆದರಿಕೆ ಹಾಕಿದ್ದಾನೆ. ಮುಂದೆ ಏನು ನಡೆಯಬಹುದು ಎಂಬ ಬಗ್ಗೆ ಭುಟ್ಟೊ ಅವರ ತವರೂರಿನ ಮೆರವಣಿಗೆಯಲ್ಲಿ ಸಂಭವಿಸಿದ ಆತ್ಮಹತ್ಯೆ ದಾಳಿಗಳಿಂದ ಅವರಿಗೆ ರುಚಿ ಸಿಕ್ಕಿರಬಹುದು ಎಂದು ಫಕೀರ್ ಅಹ್ಮದ್ ತಿಳಿಸಿದ್ದಾನೆ.
ಭುಟ್ಟೊ ಅವರ ಬಾಯಿಯನ್ನು ಕಾಯಂ ಆಗಿ ಮುಚ್ಚಿಸಲಾಗುವುದು ಎಂದು ಹೇಳುವಾಗ ಎಕೆ-47 ಬಂದೂಕುಗಳು ಮತ್ತು ರಾಕೆಟ್ ಲಾಂಚರ್‌ಗಳನ್ನು ಹಿಡಿದ ಉಗ್ರಗಾಮಿಗಳು ಘೋಷಣೆ ಕೂಗಿದರು. ಆದರೆ ಆಫ್ಘನ್ ಗಡಿ ಬಳಿಯ ಗ್ರಾಮದಲ್ಲಿ ಸಿಐಎ ವಾಯುದಾಳಿಯಿಂದ ಪಾರಾಗಿದ್ದ ಮೌಲಿ ಫಕೀರ್ ಯಾವಾಗ ಈ ಸಭೆ ಸೇರಿಸಿದ್ದನೆಂಬುದು ತಿಳಿದುಬಂದಿಲ್ಲ.
ಹಗಲುಹೊತ್ತಿನಲ್ಲಿ ನಡೆದ ಸಭೆಯ ವಿಡಿಯೋ ಚಿತ್ರವನ್ನು ಪಾಕಿಸ್ತಾನ ಟಿವಿ ಚಾನೆಲ್‌ಗಳು ತೋರಿಸಿವೆ. ಮೂಲಭೂತವಾದಿ ಧರ್ಮಗುರು ಮೌಲಾನಾ ಫಜಲುಲ್ಲಾ ಅವರ ಬೆಂಬಲಕ್ಕೆ ಸ್ವಾಟ್ ಕಣಿವೆಗೆ ತನ್ನ ಸಂಗಡಿಗರನ್ನು ಕಳಿಸುವುದಾಗಿ ಇತ್ತೀಚೆಗೆ ಹೇಳಿದ್ದ ಮೌಲಿ ಫಕೀರ್ ಆ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದನು.
|