ನಿರೀಕ್ಷೆಯಂತೆಯೇ, ದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದ, ಹಿಂಸಾಚಾರದ ನೆಪವೊಡ್ಡಿ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಸಂಪೂರ್ಣ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.
ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಕುರಿತು ನಿರ್ಧಾರ ಪ್ರಕಟಿಸಲು ಸುಪ್ರೀಂಕೋರ್ಟ್ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಇದರೊಂದಿಗೆ ಪಾಕಿಸ್ತಾನದಲ್ಲಿ ಜನವರಿ ತಿಂಗಳಲ್ಲಿ ನಡೆಯಲಿರುವ ಚುನಾವಣೆಗಳೂ ರದ್ದಾಗಲಿವೆ.
ಸೇನಾ ಮುಖ್ಯಸ್ಥರೂ ಆಗಿರುವ ಮುಷರಫ್ ಅವರು, ತುರ್ತು ಪರಿಸ್ಥಿತಿ ಕುರಿತು ಸಾಂವಿಧಾನಿಕ ಆದೇಶ ಹೊರಡಿಸಿದ್ದಾರೆ ಎಂದು ಪಾಕಿಸ್ತಾನ ಟಿವಿ ವರದಿ ಮಾಡಿದೆ.
ಲಭ್ಯ ಮಾಹಿತಿಗಳ ಪ್ರಕಾರ, ಮುಷರಫ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಇಫ್ತಿಕಾರ್ ಮೊಹಮದ್ ಚೌಧುರಿಯನ್ನು ವಜಾಗೊಳಿಸಿದ್ದು, ಪಾಕ್ ಸೇನೆಯು ಸುಪ್ರೀಂ ಕೋರ್ಟ್ ಸಹಿತ ದೇಶದ ಪ್ರಮುಖ ಕಟ್ಟಡಗಳು, ಅಧಿಕಾರ ಕೇಂದ್ರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಎಲ್ಲಾ ಸುದ್ದಿ ಚಾನೆಲ್‌ಗಳ ಪ್ರಸಾರಕ್ಕೆ ತಡೆ ವಿಧಿಸಲಾಗಿದೆಯಾದರೂ, ಮನರಂಜನಾ ಚಾನೆಲ್‌ಗಳಿಗೆ ಕಡಿವಾಣ ಹಾಕಿಲ್ಲ.
ಸುದ್ದಿ ಮಾಧ್ಯಮಗಳ ಕಚೇರಿಗಳ ಸುತ್ತ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸುವ ಮುನ್ನವೇ ಆಯಕಟ್ಟಿನ ಸ್ಥಳಗಳಿಗೆ ಸುರಕ್ಷಾ ಪಡೆಗಳನ್ನು ಕಳುಹಿಸಲಾಗಿತ್ತು.
ಪಾಕಿಸ್ತಾನದ ಪ್ರಮುಖ ಪಟ್ಟಣಗಳಲ್ಲಿ ತಡೆಬೇಲಿಗಳನ್ನು ಇರಿಸಲಾಗಿದ್ದು, ಅಲ್ಲಲ್ಲಿ ಅರೆಸರಕಾರಿ ಪಡೆಗಳನ್ನು ನಿಯೋಜಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿ ಟಿವಿ ಚಾನೆಲ್‌ಗಳ ಪ್ರಸಾರವನ್ನು ಈಗಾಗಲೇ ತಡೆಹಿಡಿಯಲಾಗಿದೆ. | ಪಾಕಿಸ್ತಾನದ ಪ್ರಮುಖ ಪಟ್ಟಣಗಳಲ್ಲಿ ತಡೆಬೇಲಿಗಳನ್ನು ಇರಿಸಲಾಗಿದ್ದು, ಅಲ್ಲಲ್ಲಿ ಅರೆಸರಕಾರಿ ಪಡೆಗಳನ್ನು ನಿಯೋಜಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿ ಟಿವಿ ಚಾನೆಲ್‌ಗಳ ಪ್ರಸಾರವನ್ನು ಈಗಾಗಲೇ ತಡೆಹಿಡಿಯಲಾಗಿದೆ. |
| |
ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರು ಸಂಬಂಧಿಕರನ್ನು ನೋಡಲೆಂದು ಈಗಾಗಲೇ ದುಬೈಗೆ ತೆರಳಿದ್ದಾರೆ.
ದೇಶದ ಪ್ರಮುಖ ಪತ್ರಕರ್ತರು ಆತಂಕದಲ್ಲಿ ಸಿಲುಕಿದ್ದು, ತುರ್ತು ಪರಿಸ್ಥಿತಿಯನ್ನು ಪ್ರಬಲವಾಗಿ ವಿರೋಧಿಸುವುದಾಗಿ ವಿರೋಧ ಪಕ್ಷಗಳು ಈಗಾಗಲೇ ಘೋಷಿಸಿವೆ.
ಮುಷರಫ್ ಅವರ ಮರು ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಈ ಪ್ರಕರಣದ ಕುರಿತು ಸೋಮವಾರ ಮತ್ತು ಮಂಗಳವಾರ ಹಾಗೂ ಆ ಬಳಿಕ ನವೆಂಬರ್ 12ರಿಂದ 14ರವರೆಗೆ ವಿಚಾರಣೆ ನಡೆಸುವುದಾಗಿ ನಿರ್ಧರಿಸಿತ್ತು.
ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ನವೆಂಬರ್ 15ರ ನಂತರ ಪ್ರಕಟಿಸಿದರೆ, ತುರ್ತುಸ್ಥಿತಿ ಹೇರಲು ಸರ್ವ ರೀತಿಯಲ್ಲೂ ಸರಕಾರ ಸಜ್ಜಾಗಿತ್ತು. ಸುಪ್ರೀಂಕೋರ್ಟ್ ತೀರ್ಪು ಮುಷರಫ್ ವಿರುದ್ಧವೇ ಹೊರಬೀಳಲಿದ್ದು ಎಂಬ ಬಗ್ಗೆ ಮುಷರಫ್ ಆಪ್ತವಲಯದಲ್ಲಿ ಆತಂಕವಿದ್ದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸುವ ಮೊದಲೇ ತುರ್ತು ಪರಿಸ್ಥಿತಿ ಹೇರಲಾಗುತ್ತದೆ ಎಂದು ಮೂಲಗಳು ನಂಬಿವೆ.
ತುರ್ತು ಪರಿಸ್ಥಿತಿಯ ಮೊದಲ ಬಲಿಪಶು ಎಂದರೆ ಮುಂದಿನ ವರ್ಷದ ಜನವರಿ ವೇಳೆಗೆ ನಡೆಯಲಿರುವ ಮಹಾಚುನಾವಣೆಗಳು. ತುರ್ತು ಸ್ಥಿತಿ ಹೇರಿದ್ದೇ ಆದಲ್ಲಿ, ರಾಷ್ಟ್ರೀಯ ಅಸೆಂಬ್ಲಿಯ ಅಧಿಕಾರಾವಧಿ ವಿಸ್ತರಿಸಲಾಗುತ್ತದೆ ಮತ್ತು ದೇಶವು ಫೆಡರಲ್ ಸರಕಾರದ ನಿಯಂತ್ರಣದಲ್ಲಿ ಗವರ್ನರ್ ಆಡಳಿತದಡಿ ಬರುತ್ತದೆ. ಹಾಲಿ ಪ್ರಧಾನಿಯೇ ಮುಂದುವರಿಯುತ್ತಾರಾದರೂ ಪ್ರಾಂತೀಯ ಸರಕಾರಗಳು ವಿಸರ್ಜನೆಯಾಗುತ್ತವೆ. ಆಯಾ ಪ್ರಾಂತ್ಯಗಳಲ್ಲಿ ಅಧಿಕಾರವೆಲ್ಲವೂ ರಾಜ್ಯಪಾಲರ ಕೈಗೆ ಹೋಗುತ್ತದೆ. ರಾಜಕೀಯ ಶಕ್ತಿಗಳು ಸಂಪೂರ್ಣವಾಗಿ ಮೂಲೆಗುಂಪಾಗುತ್ತವೆ.
|