ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಸ್ವಾತ್ ಕಣಿವೆಯಲ್ಲೀಗ ತಾಲಿಬಾನ್ ಪರ ಉಗ್ರಗಾಮಿಗಳ ಕೈ ಮೇಲಾಗಿದೆ.ಅಲ್ಲಿನ ಪರಿಸ್ಥಿತಿ ಈಗ ಅತ್ಯಂತ ಕಳವಳಕಾರಿಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಉಗ್ರವಾದಿ ಮೌಲ್ವಿ ಮೌಲಾನಾ ಫಜುಲ್ಲಾನ ಬೆಂಬಲಿಗ ಉಗ್ರಗಾಮಿಗಳು ಸ್ವಾತ್ ಕಣಿವೆಯ ಅನೇಕ ಪೊಲೀಸ್ ಠಾಣೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಭದ್ರತಾ ಸಿಬಂದಿಗಳನ್ನು ನಿಶಸ್ತ್ರಗೊಳಿಸಿದೆ.
ಮೌಲಾನಾ ಫಜುಲ್ಲಾನ ಪ್ರಾಬಲ್ಯವಿರುವ ಮತ್ತಾ ಹಾಗೂ ಖ್ವಾಜಾಖೇಲಾ ಪಟ್ಟಣದಲ್ಲಿ ಸುಮಾರು 120 ಛಾಯಾ ಸೈನಿಕರು ಮತ್ತು ಪೊಲೀಸರನ್ನು ಶನಿವಾರ ರಾತ್ರಿ ತಾವು ಒತ್ತೆ ಸೆರೆಯಲ್ಲಿ ಇಟ್ಟುಕೊಂಡಿರುವುದಾಗಿ ಉಗ್ರರು ಹೇಳಿದ್ದಾರೆ.ಅವರನ್ನು ನಿಶಸ್ತ್ರಗೊಳಿಸಿದ ಬಳಿಕ ಇಂದು ಬಿಡುಗಡೆಗೊಳಿಸಲಾಯಿತು ಎಂದು ಉಗ್ರರ ವಕ್ತಾರ ಸಿರಾಜುದ್ದೀನ್ ತಿಳಿಸಿದ್ದಾನೆ.
ಉಗ್ರರು ಪೊಲೀಸ್ ಠಾಣೆಗಳ ಮೇಲೆ ಪಾಕ್ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಟಿವಿ ಚಾನೆಲ್‌ವೊಂದು ಸುದ್ದಿ ಬಿತ್ತರಿಸಿದೆ.ನಿನ್ನೆ ಅವರು ಖ್ವಾಜಾಖೇಲ್‌ನಲ್ಲಿ ಸೆರೆಹಿಡಿದ ಸುಮಾರು 48ಭದ್ರತಾ ಸಿಬಂದಿಗಳನ್ನು ಮಾಧ್ಯಮದ ಮುಂದೆ ಪರೇಡ್ ಮಾಡಿದ ಬಳಿಕ ಬಿಡುಗಡೆ ಮಾಡಿದ್ದಾರೆ.
|