ಅಣ್ವಸ್ತ್ರ ಸಜ್ಜಿತ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ ಗೊಂದಲಗಳ ಅಂಚಿನಲ್ಲಿದ್ದು, ಪ್ರತಿಯೊಬ್ಬ ಅಮೆರಿಕನ್ನರ ದುಃಸ್ವಪ್ನವಾದ ಪರಮಾಣು ತಂತ್ರಜ್ಞಾನ ಅಥವಾ ಪರಮಾಣು ಬಾಂಬ್ ಭಯೋತ್ಪಾದಕರ ಕೈಗೆ ಸಿಗಬಹುದೆಂದು ಅಮೆರಿಕದ ಅಧಿಕಾರಿಗಳು ಭಯಪಟ್ಟಿದ್ದಾರೆ.
ಅಲ್ ಕೈದಾ ಉಗ್ರಗಾಮಿ ಸಂಘಟನೆಯು ಬಾಂಬನ್ನು ಎಲ್ಲಿ ಪತ್ತೆಹಚ್ಚಬಹುದೆಂದು ನೀವು ಜಗತ್ತಿನಾದ್ಯಂತ ಅವಲೋಕಿಸಿದರೆ ಅದು ಅವರ ಮನೆಯ ಹಿಂಭಾಗದಲ್ಲೇ ಇದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ದಕ್ಷಿಣ ಏಷ್ಯಾ ನಿರ್ದೇಶಕ ಬ್ರೂಸ್ ರೀಡಲ್ ತಿಳಿಸಿದ್ದಾರೆಂದು ನ್ಯೂಸ್‌ವೀಕ್ ವರದಿ ಮಾಡಿದೆ.
ತಿರುಗಿಬಿದ್ದ ನ್ಯಾಯಾಂಗ ಮತ್ತು ಅಲ್ ಕೈದಾ ಮತ್ತು ತಾಲಿಬಾನ್ ಪರ ಉಗ್ರರ ತೀವ್ರ ಉಪಟಳಕ್ಕೆ ಪ್ರತಿಕ್ರಿಯೆಯಾಗಿ ಮುಷರ್ರಫ್ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ತುರ್ತುಪರಿಸ್ಥಿತಿ ಘೋಷಿಸಿದ ಮುಷರ್ರಫ್ ನಿರ್ಧಾರದಿಂದ ಅಮೆರಿಕವು ಮುಷರ್ರಫ್ ನೀತಿಯನ್ನು ತ್ಯಜಿಸಿ ಪಾಕಿಸ್ತಾನ ನೀತಿಯತ್ತ ತೆರಳುವ ಅಗತ್ಯವನ್ನು ಪ್ರತಿಪಾದಿಸುತ್ತದೆ ಎಂದು ಅಮೆರಿಕದ ಸೆನೆಟ್ ಸದಸ್ಯ ಜೋಸೆಫ್ ಬಿಡೆನ್ ಹೇಳಿದರು.
ಸಂವಿಧಾನವನ್ನು ಮರುಸ್ಥಾಪನೆ ಮಾಡದಿದ್ದರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಆಸ್ಪದ ನೀಡದಿದ್ದರೆ ಮತ್ತು ಅವರು ಭರವಸೆ ನೀಡಿದಂತೆ ಜನರಲ್ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಅಮೆರಿಕ-ಪಾಕಿಸ್ತಾನ ಸಂಬಂಧಕ್ಕೆ ಧಕ್ಕೆಯಾಗಬಹುದೆಂದು ಅಧ್ಯಕ್ಷ ಬುಷ್ ಅವರು ಮುಷರ್ರಫ್‌ಗೆ ಸ್ಪಷ್ಟಪಡಿಸಬೇಕೆಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಪರ ಹೋರಾಟಗಾರ ಬುಷ್ ಎದುರಿಸುತ್ತಿರುವ ಬಿಕ್ಕಟ್ಟು ಏನೆಂದರೆ ಪಾಕಿಸ್ತಾನದಲ್ಲಿ ಅವರಿಗೆ ಹೆಚ್ಚು ಸ್ನೇಹಿತರಾರೂ ಉಳಿದಿಲ್ಲವೆಂಬುದು. ಭಯೋತ್ಪಾದನೆಗೆ ಪ್ರಜಾಪ್ರಭುತ್ವವೇ ಚಿಕಿತ್ಸೆಯಾಗುತ್ತದೆ ಎಂಬ ಬುಷ್ ಕಲ್ಪನೆಯನ್ನು ಗಟ್ಟಿಯಾಗಿ ದೃಢಪಡಿಸಲು ಜಗತ್ತಿನಲ್ಲಿ ಪಾಕಿಸ್ತಾನಕ್ಕಿಂತ ಬೇರೆ ಸ್ಥಳವಿಲ್ಲ. ಆದರೆ ಆ ನೀತಿಗೆ ಒತ್ತು ನೀಡುವಲ್ಲಿ ಅವರ ಬೂಟಾಟಿಕೆಯನ್ನು ಗಟ್ಟಿಯಾಗಿ ದೃಢಪಡಿಸಿದ ಸ್ಥಳ ಪಾಕಿಸ್ತಾನಕ್ಕಿಂತ ಬೇರೆಯಿಲ್ಲ ಎಂದು ಅವರು ನುಡಿದರು.
|