ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಚುನಾವಣೆಗಳು ನಡೆದು, ಮತ್ತೇ ಪ್ರಜಾಪ್ರಭುತ್ವ ಮರುಸ್ಥಾಪನೆಗೊಳ್ಳಬೇಕೆಂದು ಪಾಕಿಸ್ತಾನದಲ್ಲಿರುವ ಅಮೆರಿಕಾದ ರಾಯಬಾರಿ ಅನ್ನೆ ಪೀಟರ್‌ಸನ್ ಪಾಕ್ ಮೇಲೆ ಒತ್ತಡ ಹೇರಿದ್ದಾರೆ.
ಅನ್ನೆ ಅವರು ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ನಿವೃತ್ತ ನ್ಯಾಯಮೂರ್ತಿ ಖಾಜಿ ಮುಹಮ್ಮದ್ ಫಾರುಕ್ ಅವರನ್ನು ಬೇಟಿ ಮಾಡಿ ಈ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದರು.
ಪಾಕಿಸ್ತಾನದಲ್ಲಿ ಪ್ರಜಾಸತ್ತೆಯನ್ನು ಮರುಸ್ಥಾಪಿಸಬೇಕೆಂದರೆ ಪಾಕಿಸ್ತಾನ ಚುನಾವಣಾ ಆಯೋಗ ಆದಷ್ಟು ಬೇಗನೆ ಪಾಕ್ ಸಂಸತ್ತಿಗೆ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಬೇಕೆಂದವರು ಫಾರುಕ್ ಅವರ ಮೇಲೆ ಒತ್ತಡ ಹೇರಿದರು.
ಪಾಕಿಸ್ತಾನದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ನಡೆಯಲು ಅಮೆರಿಕಾ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡುತ್ತದೆ. ಆದ್ದರಿಂದ, ಆದಷ್ಟು ಬೇಗನೆ ಚುನಾವಣೆ ದಿನಾಂಕಗಳನ್ನು ಗೊತ್ತುಪಡಿಸಿ ಎಂದು ಅಮೆರಿಕಾದ ಸಂದೇಶವನ್ನು ಹೊತ್ತು ತಂದಿದ್ದ ರಾಯಬಾರಿ ಅನ್ನಾ, ಖಾಜಿ ಫರುಕ್ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟರು.
ಪಾಕಿಸ್ತಾನದ ಮೇಲೆ ಚುನಾವಣೆ ಒತ್ತಡಗಳು ವ್ಯಾಪಕವಾಗಿ ಬರಲಾರಂಭಿಸಿದ್ದು, ನವೆಂಬರ್ 15ಕ್ಕೆ ಪಾಕ್ ಸಂಸತ್ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ. ಇಲ್ಲಿಂದ 60ದಿನಗಳೊಳಗಾಗಿ ಪಾಕ್ ಸಂಸತ್ತಿಗೆ ಚುನಾವಣೆಗಳು ನಡೆಯಲಿವೆ ಎಂದು ಪ್ರಧಾನಿ ಶೌಕತ್ ಅಜೀಜ್ ಮಂಗಳವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
|