ಪಾಕಿಸ್ತಾನವು ತೀವ್ರ ಬಿಕ್ಕಟ್ಟಿನಲ್ಲಿ ನಲುಗುತ್ತಿರುವಂತೆಯೇ, ತಾಲಿಬಾನ್ ಪರ ಬಂಡುಕೋರರು ಪಾಕಿಸ್ತಾನದ ಸ್ವಾಟ್ ಪ್ರದೇಶದ ಐದು ತಹಸೀಲುಗಳನ್ನು ವಶಪಡಿಸಿಕೊಂಡಿದ್ದು, ಅಲ್ಲಿಂದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರು ತಾಲಿಬಾನ್ ಬಂಡುಕೋರರ ಜತೆಗೆ ಸಂಧಾನ ಮಾತುಕತೆ ನಡೆಸಿದ ಬಳಿಕ ಮುಲ್ಲಾ ಫಜ್ಲುಲ್ಲಾ ಬೆಂಬಲಿಗ ತಾಲಿಬಾನ್ ಬಂಡುಕೋರರು ಈ ಐದು ತಹಸೀಲುಗಳನ್ನು ತೆರವುಗೊಳಿಸಿದ್ದಾರೆ.
ಈ ಹಿಂದೆ, ಮಟಟಾ, ಖವಾಜಕೇಲ್, ಕಬಾಲ್ ಹಾಗೂ ಚಾರ್‌ಬಾಗ್ ತೆಹಸೀಲುಗಳನ್ನು ಬಂಡುಕೋರರು ವಶಕ್ಕೆ ತೆಗೆದುಕೊಂಡಿದ್ದರು ಮತ್ತು ತನ್ನದೇ ಅಧಿಕಾರಿಗಳನ್ನು ನಿಯೋಜಿಸಿದ್ದರು. ಕಲಾಂ ಮತ್ತು ಮದಾನ್ ಪ್ರದೇಶದ ಪೊಲೀಸ್ ಠಾಣೆಗಳನ್ನೂ ಅವರು ವಶಪಡಿಸಿಕೊಂಡು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ಬಂಡುಕೋರರು ಸರಕಾರಿ ವಾಹನಗಳನ್ನೂ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಇಮಾಮ್ ಡೇರಿ, ಛೋಟಾ ಕಲಾಂ, ಶಕಾರ್ ಡಾರಾ, ಪೀರ್ ಕಲಯ್, ಬಾರಿಂಪುಲ್ ಮತ್ತು ಚಾರ್‌ಬಾಗ್ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನೂ ಸ್ಥಾಪಿಸಿದ್ದರು.
|