ಪ್ರಕ್ಷುಬ್ಧ ಸ್ವಾಟ್ ಕಣಿವೆಯಲ್ಲಿ 200 ಅರೆಮಿಲಿಟರಿ ಸಿಬ್ಬಂದಿ ತಾಲಿಬಾನ್ ಪರ ಉಗ್ರಗಾಮಿಗಳಿಗೆ ಶುಕ್ರವಾರ ಶರಣಾಗಿರುವುದು ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಕರಾಳಹಸ್ತ ಚಾಚಿರುವುದಕ್ಕೆ ನಿದರ್ಶನವಾಗಿದೆ. ಇದರಿಂದ ವಾಯವ್ಯ ಬುಡಕಟ್ಟು ಪ್ರದೇಶದಲ್ಲಿ ಉಗ್ರಗಾಮಿಗಳನ್ನು ಸದೆಬಡಿಯುವ ಕಾರ್ಯಾಚರಣೆಯಲ್ಲಿ ಹಿನ್ನಡೆ ಉಂಟಾಗಿರುವುದು ಪಾಕಿಸ್ತಾನ ಸರ್ಕಾರ ಮುಜುಗರದ ಪರಿಸ್ಥಿತಿ ಎದುರಿಸುವಂತಾಗಿದೆ.
ಮೂಲಭೂತವಾದಿ ಧರ್ಮಗುರು ಮೌಲಾನಾ ಫಜಲುಲ್ಲಾ ನೇತೃತ್ವದ ಉಗ್ರರು 200 ಮಂದಿ ಮುಂಚೂಣಿ ಸೈನಿಕರ ಶಿಬಿರಕ್ಕೆ ಮುತ್ತಿಗೆ ಹಾಕಿದಾಗ ಸೈನಿಕರು ಶರಣಾದರು. ಉಗ್ರಗಾಮಿಗಳು ಕಠಿಣ ಇಸ್ಲಾಮಿಕ್ ಕಾನೂನು ಅಥವಾ ಶರಿಯತ್ ತರಬೇಕೆಂದು ಒತ್ತಾಯಿಸುತ್ತಿದ್ದು, ಬಹುತೇಕ ಭದ್ರತಾ ಪಡೆಗಳನ್ನು ಅಟ್ಟುವ ಮೂಲಕ ಆ ಪ್ರದೇಶದಲ್ಲಿ ಭದ್ರಹಿಡಿತವನ್ನು ಹೊಂದಿದ್ದರು.
ಉಗ್ರರು ಮುತ್ತಿಗೆ ಹಾಕಿದ ಕೂಡಲೇ ಭದ್ರತಾ ಸಿಬ್ಬಂದಿ ಯಾವ ಪ್ರತಿರೋಧವನ್ನೂ ತೋರದೇ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾದರು ಎಂದು ಡಾನ್ ಸುದ್ದಿಚಾನೆಲ್ ವರದಿ ಮಾಡಿದೆ. ಸ್ವಾಟ್‌ನಲ್ಲಿ ಬಹುತೇಕ ಭದ್ರತಾ ಚೌಕಿಗಳು ಮತ್ತು ಪೊಲೀಸ್ ಠಾಣೆಗಳು ಉಗ್ರಗಾಮಿಗಳ ವಶದಲ್ಲಿರುವುದರಿಂದ ಅಲ್ಲಿ ಭದ್ರತಾ ಸಿಬ್ಬಂದಿಯ ಉಪಸ್ಥಿತಿಯೇ ಇಲ್ಲವೆನ್ನಬಹುದು.
ಬಂಡುಕೋರರು 6 ತೆಹಸೀಲ್‌ಗಳು ಅಥವಾ ಉಪ ಜಿಲ್ಲೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಶೇ. 80ರಷ್ಟು ಪ್ರಕೃತಿಸೌಂದರ್ಯದ ಸ್ವಾಟ್ ಕಣಿವೆ ಅವರ ವಶದಲ್ಲಿದೆ. ಉಗ್ರಗಾಮಿಗಳು ಪೊಲೀಸ್ ಠಾಣೆಗಳು ಮತ್ತಿತರ ಸರ್ಕಾರಿ ಕಟ್ಟಡಗಳಲ್ಲಿ ಪಾಕಿಸ್ತಾನದ ದ್ವಜವನ್ನು ಬದಲಿಸಿ ಕುರಾನ್ ಬರಹವಿರುವ ಸ್ವಂತ ಧ್ವಜಗಳನ್ನು ನೆಟ್ಟಿದ್ದಾರೆ.
|