ಪಾಕಿಸ್ತಾನದ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆಗೆ ಇಳಿಯುವ ಹಿನ್ನೆಲೆಯಲ್ಲಿ, ಶುಕ್ರವಾರ ಬೆಳಿಗ್ಗೆ ಗೃಹಬಂಧನಕ್ಕೆ ಒಳಗಾಗಿದ್ದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಪಾಕ್ ಸರಕಾರ ಶುಕ್ರವಾರ ತಡ ರಾತ್ರಿ ಗೃಹ ಬಂಧನದಿಂದ ಮುಕ್ತಗೊಳಿಸಿದೆ.
ಪಾಕಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ವಿಷಯವನ್ನು ಧೃಢಪಡಿಸಿದ್ದು, ಅಂತಾರಾಷ್ಟ್ರೀಯ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪಾಕ್ ಸರಕಾರ ಶುಕ್ರವಾರ ತಡ ರಾತ್ರಿಯೇ ಭುಟ್ಟೊ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿದೆ.
ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯಾಗಿರುವ ಕಮಲ್ ಶಾಹ್ ಶುಕ್ರವಾರ ತಡ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದ್ದು, "ಭುಟ್ಟೊ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದೆ" ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿಯನ್ನು ಖಂಡಿಸಿ ರಾವಲ್ಪಿಂಡಿಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೋ ಅವರನ್ನು ಪ್ರತಿಭಟನೆಯ ಆರಂಭಕ್ಕೆ ಮುಂಚೆಯೇ ಶುಕ್ರವಾರ ಮುಂಜಾನೆ ಗೃಹಬಂಧನಕ್ಕೀಡು ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
"ಪಾಕ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಹೋರಾಡುತ್ತಿರುವ ನಾನು ನಿಮ್ಮಸಹೋದರಿ, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನನಗೇನು ಚಿಂತೆಯಿಲ್ಲ. ನಾನು ಪಾಕಿಸ್ತಾನದ ಜನತೆಗಾಗಿ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡುತ್ತೇನೆ. ಈ ಮೂಲಕ ಸರ್ವಾಧಿಕಾರವನ್ನು ಕಿತ್ತೊಗೆಯಲು ಪ್ರಯತ್ನಿಸೋಣ" ಎಂದು ಗೃಹ ಬಂಧನದಿಂದ ಮುಕ್ತಗೊಂಡ ನಂತರ ಪಾಕ್ ಜನತೆಯನ್ನುದ್ದೇಶಿಸಿ ಭುಟ್ಟೊ ಮಾತನಾಡಿದರು.
|