ದುಬೈಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಏಳು ಭಾರತೀಯರ ಸಾವಿಗೆ ಕಾರಣವಾದ ದುರಂತಕ್ಕೆ ಸಂಬಂಧಿಸಿ ಮೂವರು ಭಾರತೀಯರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳು ನರಹತ್ಯೆ ಆಪಾದನೆಯನ್ನು ಎದುರಿಸಬೇಕಾಗಿದೆ.
ವೇಡ್ ಆಡಮ್ಸ್ ಗುತ್ತಿಗೆ ಕಂಪೆನಿಯ ನೌಕರರಾದ ಓರ್ವ ಇಂಜಿನಿಯರ್ ಮತ್ತು ಓರ್ವ ಹೆಲ್ಪರ್ ಹಾಗೂ ಉಪಕರಣಗಳನ್ನು ಬಾಡಿಗೆಗೆ ಒದಗಿಸುವ ಕಂಪೆನಿಯೊಂದರಿಂದ ತರಿಸಿಕೊಳ್ಳಲಾದ ಓರ್ವ ಕ್ರೇನ್ ಚಾಲಕ ಬಂಧಿತರಾಗಿದ್ದು ಅವರೆಲ್ಲ ಈಗ ಪೊಲೀಸ್ ಬಂಧನದಲ್ಲಿದ್ದಾರೆ. ಪ್ರಕರಣವು ನಾಳೆ ಪಬ್ಲಿಕ್ ಪ್ರಾಸಿಕ್ಯೂಶನ್ ಕೈಗೆ ಬರಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಭಾರತೀಯರೆಂದು ಗುತ್ತಿಗೆ ಕಂಪೆನಿಯ ವಕ್ತಾರ ದೃಢೀಕರಿಸಿದ್ದಾರೆ. ಮೃತರ ಶವಗಳನ್ನು ಪೊಲೀಸರು ಅನುಮತಿ ನೀಡಿದ ಬಳಿಕ ಭಾರತಕ್ಕೆ ರವಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಂಗಳವಾರದೊಳಗೆ ಶವಗಳನ್ನು ಭಾರತಕ್ಕೆ ಕಳುಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಮೃತರ ಕುಟುಂಬಗಳಿಗೆ ಪರಿಹಾರವಾಗಿ 10ವರ್ಷಗಳ ಸಂಬಳವನ್ನು ಕಂಪೆನಿ ನೀಡಲಿದೆ.
|