ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಹೇರಿರುವ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ವಿರುದ್ಧ ಸಮರ ಸಾರಿರುವ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರು, ಈ ತೆರನಾದ ಸರ್ವಾಧಿಕಾರದ ಧೋರಣೆ ಉಗ್ರರಿಗೆ ಮತ್ತಷ್ಟು ಉತ್ತೇಜನ ನೀಡಿದಂತೆ ಎಂದು ಅವರು ಆರೋಪಿಸಿದ್ದಾರೆ.
ಆಕೆಯನ್ನು ಗೃಹಬಂಧನದಿಂದ ಮುಕ್ತಗೊಳಿಸುವಂತೆ ಆದೇಶ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ ಪಾಕಿಸ್ತಾನದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಪಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ನಂತರ ದೇಶದಲ್ಲಿನ ವಿರೋಧ ಪಕ್ಷದ ನಾಯಕರು, ವಕೀಲರು ಸೇರಿದಂತೆ ಪ್ರಮುಖರನ್ನು ಬಂಧಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಭುಟ್ಟೋ ಅವರನ್ನು ಗೃಹಬಂಧನದಲ್ಲಿಡಲಾಗಿತ್ತು.ಶನಿವಾರದಂದೇ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿತ್ತು.
ಬಳಿಕ ಭುಟ್ಟೋ ನ್ಯಾಯಾಧೀಶರ ಕಾಲೋನಿಗೆ ತೆರಳಿ ಅಲ್ಲಿ ಇಫ್ತಿಕಾರ್ ಚೌಧುರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ನಾನು ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಹೊಂದಿದ್ದು, ಇಫ್ತಿಕಾರ ಚೌಧುರಿಯೇ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು ಎಂಬುದಾಗಿ ತಿಳಿಸಿರುವುದಾಗಿ ಪಿಪಿಪಿಯ ಅಧ್ಯಕ್ಷ ಸುದ್ದಿಗಾರರಿಗೆ ತಿಳಿಸಿದರು.
ಏತನ್ಮಧ್ಯೆ ನ್ಯಾಯಾಧೀಶರ ಕಾಲೋನಿಯ ಗೇಟ್ ಬಳಿ ಭುಟ್ಟೋ ಅವರನ್ನು ಸುಮಾರು 200 ಮಂದಿ ಮಾಧ್ಯಮ ಪ್ರತಿನಿಧಿಗಳು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಪೊಲೀಸರು ಮತ್ತು ಭುಟ್ಟೋ ನಡುವೆ ಮಾತಿನ ಚಕಮಕಿ ನಡೆಯಿತು.
ಯಾವುದೇ ಕಾರಣಕ್ಕೂ ಮಿಲಿಟರಿ ಆಡಳಿತದ ಹೆಸರಲ್ಲಿ ಮಾಧ್ಯಮಗಳ ಹಕ್ಕನ್ನು ಹತ್ತಿಕ್ಕುವುದನ್ನು ತಾನು ವಿರೋಧಿಸುತ್ತೇನೆ ಎಂದು ಭುಟ್ಟೋ ಈ ಸಂದರ್ಭದಲ್ಲಿ ಹೇಳಿದರು. ಅಲ್ಲದೇ ತನ್ನ ಹೋರಾಟ ಯಾವತ್ತೂ ಪ್ರಜಾಪ್ರಭುತ್ವಕ್ಕಾಗಿ ಎಂದು ಸ್ಪಷ್ಟಪಡಿಸಿದರು.
|