ರಷ್ಯಾಗೆ ಭೇಟಿ ನೀಡಿರುವ ಭಾರತದ ಪ್ರಧಾನಮಂತ್ರಿ ಮನಮೋಹನ ಸಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಾಗರಿಕ ಪರಮಾಣು ಸಹಕಾರಕ್ಕೆ ನಿರೀಕ್ಷಿಸಿದ್ದ ಸಮಗ್ರ ಒಡಂಬಡಿಕೆಯು ಫಲಿಸಲಿಲ್ಲ. ಆದರೆ ಭಾರತದ ಪರಮಾಣು ಶಕ್ತಿ ಕಾರ್ಯಕ್ರಮಕ್ಕೆ ಪೂರಕವಾದ ನಿಶ್ಚಲ ಬೆಂಬಲ ನೀಡಿರುವುದಕ್ಕೆ ಸಿಂಗ್ ರಷ್ಯಾಗೆ ಧನ್ಯವಾದ ಅರ್ಪಿಸಿದರು.
ನಾವು ಪರಮಾಣು ಶಕ್ತಿ ಕುರಿತ ನಮ್ಮ ಮಾತುಕತೆ ಮುಂದುವರಿಸಿದ್ದೇವೆ ಎಂದು ಪುಟಿನ ಜತೆ ಜಂಟಿ ಪತ್ರಿಕಾ ಸಂವಾದದಲ್ಲಿ ಸಿಂಗ್ ನುಡಿದರು. ನಮ್ಮ ಪರಮಾಣು ಶಕ್ತಿ ಕಾರ್ಯಕ್ರಮಕ್ಕೆ ಪೂರಕವಾಗಿ ನಿಶ್ಚಲ ಬೆಂಬಲ ನೀಡಿದ್ದಕ್ಕಾಗಿ ಮತ್ತು ಅಂತಾರಾಷ್ಟ್ರೀಯ ನಿರ್ಬಂಧ ತೆಗೆಯಲು ಸಹಕರಿಸಿದ್ದಕ್ಕಾಗಿ ತಾವು ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ್ದಾಗಿ ಅವರು ನುಡಿದರು.
ಭಾರತ ರಷ್ಯಾ ಜತೆ ಸಮಗ್ರ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವುದೆಂದು ನಿರೀಕ್ಷಿಸಲಾಗಿದ್ದು, ಇದರಿಂದ ಉಭಯ ರಾಷ್ಟ್ರಗಳ ನಡುವೆ ಪರಮಾಣು ಸಹಯೋಗವನ್ನು ವಿಸ್ತರಿಸಲು ನೆರವಾಗುತ್ತದೆ.
ರಷ್ಯಾದ ಉಪಪ್ರಧಾನ ಮಂತ್ರಿ ಅಲೆಕ್ಸಾಂಡರ್ ಜುಕೋವ್ ನವದೆಹಲಿಗೆ ಭೇಟಿ ನೀಡಿದ್ದಾಗ ಮನಮೋಹನ್ ಸಿಂಗ್ ನವೆಂಬರ್‌ನಲ್ಲಿ ಭೇಟಿ ನೀಡುವ ಸಂದರ್ಭದಲ್ಲಿ ಒಪ್ಪಂದಕ್ಕೆ ಅಂತಿಮಸ್ವರೂಪ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ ಉಭಯ ರಾಷ್ಟ್ರಗಳು ಇಂದು ಸಹಿ ಹಾಕಿದ ನಾಲ್ಕು ಒಪ್ಪಂದಗಳಲ್ಲಿ ಪರಮಾಣು ಒಪ್ಪಂದ ಸೇರಿರಲಿಲ್ಲ,
ಭಾರತ-ರಷ್ಯಾ ಬಾಂಧವ್ಯ ವ್ಯೂಹಾತ್ಮಕ ಪಾಲುದಾರಿಕೆ ಆಧರಿಸಿದೆ ಎಂದು ಹೇಳಿದ ಸಿಂಗ್ ಆರ್ಥಿಕ ಅಂಶದ ಬಗ್ಗೆ ಗಮನಸೆಳೆದು ಅದು ವ್ಯೂಹಾತ್ಮಕ ಸಹಯೋಗದ ಆಧಾರಸ್ತಂಭ ಎಂದರು. 2010ರೊಳಗೆ 10 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರದ ಗುರಿ ಸಾಧನೆಗೆ ಉಭಯ ರಾಷ್ಟ್ರಗಳು ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲು ಒಪ್ಪಿಕೊಂಡಿವೆ ಎಂದು ಅವರು ನುಡಿದರು.
|