ಅಧ್ಯಕ್ಷ ಮುಷರ್ರಫ್ ಹೇರಿದ ತುರ್ತುಪರಿಸ್ಥಿತಿ ವಿರೋಧಿಸಿ ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೆ ರಾಲಿಯನ್ನು ನಡೆಸಲು ನಿರ್ಧರಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರನ್ನು ಮಂಗಳವಾರ ಬಂಧಿಸಿ 7 ದಿನಗಳವರಗೆ ಗೃಹಬಂಧನದಲ್ಲಿ ಇಡಲಾಗಿದೆ.
ಪಂಜಾಬ್ ಸರ್ಕಾರದ ಗೃಹ ಇಲಾಖೆ ಈ ಬಂಧನದ ಆದೇಶ ನೀಡಿದ್ದು, ಎಲ್ಲ ರಾಜಕೀಯ ರಾಲಿಗಳು ತುರ್ತುಪರಿಸ್ಥಿತಿ ನಿಯಮಗಳಡಿ ನಿಷೇಧಿಸಲಾಗಿದೆ ಎಂದು ಈ ಮುಂಚೆ ಹೇಳಿಕೆ ನೀಡಿತ್ತು.
ಭುಟ್ಟೊ ಪ್ರಸಕ್ತ ತಂಗಿರುವ ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಲತೀಫ್ ಖೋಸಾ ನಿವಾಸದಲ್ಲಿ ಪೊಲೀಸರು ಈ ಬಂಧನದ ಆದೇಶ ಜಾರಿ ಮಾಡಿದರು. ದೀರ್ಘ ಮೆರವಣಿಗೆ ನಡೆಸುವ ವಿರುದ್ಧ ಸರ್ಕಾರ ಎಚ್ಚರಿಕೆ ನೀಡಿದ್ದರೂ, ತುರ್ತುಪರಿಸ್ಥಿತಿಯನ್ನು ಅಂತ್ಯಗೊಳಿಸುವಂತೆ ಮುಷರ್ರಫ್ ಮೇಲೆ ಒತ್ತಡಹೇರಲು ಭುಟ್ಟೊ ಪಂಜಾಬ್ ಪ್ರಾಂತ್ಯದಾದ್ಯಂತ ಕಾರ್ಯಕರ್ತರ ಮೆರವಣಿಗೆ ನಡೆಸಲು ಪಣತೊಟ್ಟಿದ್ದರು.
ಭುಟ್ಟೊ ಅವರ ಹತ್ಯೆಗೆ ಆತ್ಮಹತ್ಯೆ ಬಾಂಬರ್‌ಗಳು ಹೊಂಚು ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರ ರಕ್ಷಣೆ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಂಜಾಬ್ ಸರ್ಕಾರದ ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ. ಮಧ್ಯರಾತ್ರಿ ಕಳೆದ ಬಳಿಕ ನೂರಾರು ಪೊಲೀಸರು ಖೋಸಾ ನಿವಾಸವನ್ನು ಸುತ್ತುವರಿದು, ಜನತೆ ಮತ್ತು ಮಾಧ್ಯಮ ಅಲ್ಲಿ ಸುಳಿಯದಂತೆ ತಡೆವಿಧಿಸಿದ್ದಾರೆ.
|