ಪಾಕಿಸ್ತಾನದ ಕ್ರಿಕೆಟರ್ ಮತ್ತು ರಾಜಕಾರಣಿ ಇಮ್ರಾನ್ ಖಾನ್ ತುರ್ತುಪರಿಸ್ಥಿತಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪ್ರತ್ಯಕ್ಷರಾದಾಗ ವಿದ್ಯಾರ್ಥಿಗಳೇ ಅವರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಜಮಾತೆ ಇಸ್ಲಾಮಿ ಪಕ್ಷದ ಸಂಘಟನೆಯೊಂದು ಲಾಹೋರ್‌ನಲ್ಲಿ ವಿದ್ಯಾರ್ಥಿ ರಾಲಿಯನ್ನು ಪ್ರಾಯೋಜಿಸಿದ್ದಾಗ ಇಮ್ರಾನ್ ಖಾನ್ ಅವರಿಗೆ ಆಹ್ವಾನ ನೀಡಿರದಿದ್ದರೂ ಅಲ್ಲಿ ಪ್ರತ್ಯಕ್ಷರಾದರು. ರಾಲಿಗೆ ರಾಜಕೀಯ ಬಣ್ಣ ನೀಡುವುದು ತಮಗಿಷ್ಟವಿಲ್ಲ ಎಂದು ಸಂಘಟನೆ ಇಮ್ರಾನ್ ಖಾನ್ ಅವರಿಗೆ ಮುಂಚೆಯೇ ಸ್ಪಷ್ಟಪಡಿಸಿತ್ತು.
ಆದರೆ ಇಮ್ರಾನ್ ಖಾನ್ ಕರೆಯದೆ ಬಂದ ಅತಿಥಿಯಾದಾಗ ಪರಿಸ್ಥಿತಿ ಹದಗೆಟ್ಟಿತು. ಖಾನ್‌ಗೆ ವಿದ್ಯಾರ್ಥಿಗಳು ಅವಮಾನಿಸಿ ಅವರ ಕಾರಿಗೆ ತಳ್ಳಿದ್ದಲ್ಲದೇ ಕಾರಿನ ಮೇಲೆ ದಾಳಿ ಮಾಡಿ ಕಾಲುಗಳಲ್ಲಿ ಒದ್ದು ವಿವಿಯ ಆವರಣದ ಹೊರಗೆ ಅಟ್ಟಿದರು. ಪೊಲೀಸರನ್ನು ವಿದ್ಯಾರ್ಥಿಗಳು ಕರೆಸಿದ ಬಳಿಕ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು.
ಖಾನ್ ತಮ್ಮ ರಹಸ್ಯತಾಣದಿಂದ ಇಂಡಿಪೆಂಡೆಂಟ್ ಸುದ್ದಿಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನ್ಯಾಯಾಂಗ ರಕ್ಷಣೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ನುಡಿದಿದ್ದರು. ತುರ್ತುಪರಿಸ್ಥಿತಿ ಹೇರಿಕೆಯಿಂದ ನ್ಯಾಯಾಂಗವನ್ನು ನಿಷ್ಕ್ರಿಗೊಳಿಸುವ ಮುಷರ್ರಫ್ ಉದ್ದೇಶ ಸಾಧನೆಯಾಗಿದೆ.
ಅವರು ತುರ್ತುಪರಿಸ್ಥಿತಿ ತೆರವು ಮಾಡಿ ಚುನಾವಣೆ ನಡೆಸಿದರೂ ಅದು ಅರ್ಥಹೀನವೆನಿಸುತ್ತದೆ ಎಂದು ಹೇಳಿದ್ದರು. 1992ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಖಾನ್ ತುರ್ತುಪರಿಸ್ಥಿತಿ ಹೇರಿದ ಬಳಿಕ ಗೃಹಬಂಧನದಿಂದ ತಪ್ಪಿಸಿಕೊಂಡು ಭೂಗತರಾಗಿದ್ದರು.
|