ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ಗುರುವಾರ ಮಧ್ಯರಾತ್ರಿ ವಿಸರ್ಜಿಸಲಾಗುವುದು ಮತ್ತು ಉಸ್ತುವಾರಿ ಸರ್ಕಾರ ಶುಕ್ರವಾರ ಪ್ರಮಾಣವಚನ ಸ್ವೀಕರಿಸುತ್ತದೆ ಎಂದು ಮಾಹಿತಿ ಖಾತೆ ರಾಜ್ಯ ಸಚಿವ ತಾರೀಖ್ ಅಜೀಮ್ ಗುರುವಾರ ತಿಳಿಸಿದರು.ಸಂಸತ್ತು ಐದು ವರ್ಷಗಳ ಅವಧಿ ಮುಗಿಸಿರುವುದರಿಂದ ಅದು ತಾನೇತಾನಾಗಿ ವಿಸರ್ಜನೆಯಾಗಲಿದೆ.
ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆಯಾಗಿ ನ.20ರಂದು ಪಂಜಾಬ್, ಸಿಂಧ್ ಮತ್ತು ಬಲೂಚಿಸ್ತಾನದ ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಲಾಗುವುದು ಎಂದು ಅಜೀಮ್ ಹೇಳಿದರು.
ವಾಯವ್ಯ ಮುಂಚೂಣಿ ಪ್ರಾಂತ್ಯದಲ್ಲಿ ಕಳೆದ ತಿಂಗಳು ಅಸೆಂಬ್ಲಿ ವಿಸರ್ಜನೆ ಮಾಡಿರುವುದರಿಂದ ಅಲ್ಲಿ ಈಗಾಗಲೇ ಉಸ್ತುವಾರಿ ಸರ್ಕಾರವಿದೆ ಎಂದು ಹೇಳಿದರು.ರಾಷ್ಟ್ರೀಯ ಅಸೆಂಬ್ಲಿಯು 22 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಅವಧಿ ಮುಗಿಸಿದೆ ಎಂದು ಅಜೀಮ್ ಗಮನಸೆಳೆದರು.
ಏತನ್ಮಧ್ಯೆ, ಸೆನೆಟ್ ಅಧ್ಯಕ್ಷ ಮೊಹಮದನ್ ಸೂಮ್ರೊ ಉಸ್ತುವಾರಿ ಪ್ರಧಾನಮಂತ್ರಿ ಹುದ್ದೆಗೆ ಮುಂಚೂಣಿ ಸ್ಥಾನದಲ್ಲಿದ್ದಾರೆ. ಸರ್ಕಾರ ಹೆಸರಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಮಾಜಿ ರಾಜತಾಂತ್ರಿಕರು ಮತ್ತು ನಿವೃತ್ತ ಜನರಲ್‌ಗಳ ಸಹಿತ ಅವರ ಹೆಸರು ಮೇಲಿನ ಸ್ಥಾನದಲ್ಲಿದೆ.
ಮಾಜಿ ಬ್ಯಾಂಕರ್ ಮತ್ತು ಸೂಮ್ರೋ ಬುಡಕಟ್ಟು ಜನಾಂಗದ ಮುಖ್ಯಸ್ಥನಿಗೆ ಮುಷರ್ರಫ್, ಪ್ರಧಾನ ಮಂತ್ರಿ ಶೌಕತ್ ಅಜೀಜ್ ಮತ್ತು ಆಡಳಿತರೂಢ ಪಿಎಂಎಲ್- ಕ್ಯೂ ಮುಖಂಡ ಚೌಧರಿ ಶುಜಾತ್ ಹುಸೇನ್ ಬೆಂಬಲವಿದೆ ಎಂದು ವರದಿಗಳು ತಿಳಿಸಿವೆ.
|