ಉತ್ತರ ಚಿಲಿಯಲ್ಲಿ 7.7 ತೀವ್ರತೆಯ ಭೂಕಂಪ ಗುರುವಾರ ಅಪ್ಪಳಿಸಿದ್ದು ಕನಿಷ್ಠ ಇಬ್ಬರು ಸತ್ತಿದ್ದಾರೆ, ಹತ್ತಾರು ಜನರು ಗಾಯಗೊಂಡಿದ್ದಾರೆ ಹಾಗೂ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಟೊಕೊಪಿಲ್ಲಾ ಬಂದರು ನಗರದಲ್ಲಿ ಕುಸಿದುಬಿದ್ದ ಗೋಡೆಗಳಡಿ ಸಿಕ್ಕಿ 88 ವರ್ಷ ವಯಸ್ಸಿನ ವೃದ್ಧೆ ಮತ್ತು 54 ವರ್ಷ ವಯಸ್ಸಿನ ಮಹಿಳೆ ಸತ್ತಿದ್ದಾರೆ. ಮಧ್ಯಾಹ್ನ 12.43 ಸ್ಥಳೀಯ ಕಾಲಮಾನದಲ್ಲಿ ಭೂಕಂಪ ಅಪ್ಪಳಿಸಿದೆ.ಕನಿಷ್ಠ 45 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದರೆ, ಮಾಧ್ಯಮದ ವರದಿಗಳು 100 ಮಂದಿ ಗಾಯಗೊಂಡಿದ್ದಾರೆಂದು ಹೇಳಿದೆ.
ಭೂಕಂಪದಿಂದ ಕನಿಷ್ಠ 4000 ಜನರು ನಿರಾಶ್ರಿತರಾಗಿದ್ದು, 1,200 ಮನೆಗಳು ನೆಲಸಮವಾಗಿವೆ ಎಂದು ಟೊಕೊಪಿಲ್ಲಾ ಮೇಯರ್ ಲೂಯಿಸ್ ಮೊಂಕಾಯ ತಿಳಿಸಿದ್ದಾರೆ.
ಭೂಕಂಪದ ಕೇಂದ್ರಬಿಂದು ಚಿಲಿ ರಾಜಧಾನಿ ಸಾಂಟಿಯಾಗೊಗೆ 12,60 ಕಿಮೀ ಉತ್ತರಕ್ಕೆ ಕೇಂದ್ರೀಕೃತವಾಗಿತ್ತು. ಭೂಕಂಪನವಾಗುತ್ತಿದ್ದಂತೆ ಅವಶೇಷಗಳಡಿ ಸಿಕ್ಕಿ ಕಾರುಗಳು ನಜ್ಜುಗುಜ್ಜಾದ ದೃಶ್ಯಗಳನ್ನು ಮತ್ತು ಭಯಭೀತರಾದ ಜನರು ಮನೆಯಿಂದ ಹೊರಗೆ ಓಡುತ್ತಿದ್ದುದನ್ನು ಚಿಲಿಯ ಟಿವಿಎನ್ ಟೆಲಿವಿಷನ್ ವಿಡಿಯೊ ಚಿತ್ರಗಳಲ್ಲಿ ತೋರಿಸಲಾಗಿದೆ.
|