ರಾಷ್ಟ್ರದ ರಾಜಧಾನಿಯಿಂದ ತಮ್ಮನ್ನು ಸ್ಥಳಾಂತರಿಸುವ ಸರ್ಕಾರದ ಯಾವುದೇ ಪ್ರಯತ್ನವನ್ನು ಅಪಹರಣಕ್ಕೆ ಹೋಲಿಸಬಹುದಾಗಿದೆ ಎಂದು ಈಗ ಗೃಹಬಂಧನದಲ್ಲಿರುವ ವಜಾಗೊಂಡ ಮುಖ್ಯ ನ್ಯಾಯಮೂರ್ತಿ ಚೌಧರಿ ಹೇಳಿದ್ದಾರೆ.
ನ.3ರಂದು ಅಧ್ಯಕ್ಷ ಮುಷರ್ರಫ್ ಹೇರಿದ ತುರ್ತುಪರಿಸ್ಥಿತಿಗೆ ಅನುಮೋದನೆ ನೀಡಲು ನಿರಾಕರಿಸಿದ್ದ ಚೌಧರಿ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್‌ಗೆ ಬುಧವಾರ "ಆದೇಶ" ಕಳಿಸಿ ತಮ್ಮನ್ನು ಬಲಾತ್ಕಾರದಿಂದ ಕ್ವೆಟ್ಟಾಗೆ ವರ್ಗಾಯಿಸಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಇಸ್ಲಾಮಾಬಾದ್‌ನಿಂದ ತಮ್ಮನ್ನು ಹೊರಗೆ ಸ್ಥಳಾಂತರಿಸುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇಸ್ಲಾಮಾಬಾದ್ ಪೊಲೀಸ್ ಅಧಿಕಾರಿಗೆ ತಮ್ಮ "ಆದೇಶ"ದಲ್ಲಿ ಅವರು ಸೂಚಿಸಿದ್ದಾರೆಂದು ಚೌಧರಿ ಕುಟುಂಬಕ್ಕೆ ನಿಕಟವರ್ತಿಯಾದ ವಕೀಲರೊಬ್ಬರು ಹೇಳಿದ್ದಾರೆ. ಚೌಧರಿ ತಮ್ಮ ನಿವಾಸದಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ದೂರವಾಣಿ ಸಂಪರ್ಕ ಕಡಿದುಹಾಕಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ಚೌಧರಿ ಬರೆದಿರುವ ಪತ್ರದವಲ್ಲಿ ತಮಗೆ ಕ್ವೆಟ್ಟಾ ಅಥವಾ ಬೇರಾವುದೇ ಕಡೆ ಹೋಗಲು ಆಸಕ್ತಿಯಿಲ್ಲ. ಹಾಗೆ ಬಲವಂತವಾಗಿ ಸ್ಥಳಾಂತರಿಸಿದರೆ ಅದು ಅಪಹರಣ ಕೃತ್ಯವೆನಿಸುತ್ತದೆ ಮತ್ತು ಒಳಾಡಳಿತ ಕಾರ್ಯದರ್ಶಿ, ಇಸ್ಲಾಮಾಬಾದ್ ಆಯುಕ್ತ, ಉಪ ಆಯುಕ್ತ ಮತ್ತು ಸಹಾಯಕ ಆಯುಕ್ತ ಜವಾಬ್ದಾರಿಯಾಗುತ್ತಾರೆ.
ಪ್ರಸಕ್ತ ಪಾಕಿಸ್ತಾನದ ಮುಖ್ಯನ್ಯಾಯಮೂರ್ತಿ ಹುದ್ದೆಯನ್ನು ಸಂವಿಧಾನದ ಪ್ರಕಾರ ಹೊಂದಿದ್ದು ಅಧಿಕೃತ ನಿವಾಸದಲ್ಲಿದ್ದೇನೆ. ನ.3ರಿಂದ ತಮ್ಮನ್ನು ಕುಟುಂಬದ ಸಮೇತ ಯಾವುದೇ ಕಾನೂನಿನ ಸಮರ್ಥನೆಯಿಲ್ಲದೇ ಇರಿಸಲಾಗಿದೆ ಎಂದು ಚೌಧರಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮನ್ನು ಮತ್ತು ಕುಟುಂಬವನ್ನು ಮನೆಯಿಂದ ಹೊರಗೆ ಕಾಲಿಡಲು ಬಿಡುತ್ತಿಲ್ಲ ಮತ್ತು ಮಕ್ಕಳನ್ನು ಶಾಲೆಯ ತರಗತಿಗೆ ಹಾಜರಾಗಲೂ ಅವಕಾಶ ನೀಡುತ್ತಿಲ್ಲ ಎಂದು ಚೌಧರಿ ಆಪಾದಿಸಿದ್ದಾರೆ.
|