ತುರ್ತುಪರಿಸ್ಥಿತಿ ಜಾರಿಗೆ ಬಂದಿರುವ ಪಾಕಿಸ್ತಾನದ ಪರಿಸ್ಥಿತಿ ಬಗ್ಗೆ ತೀವ್ರ ಕಳವಳದ ಲಕ್ಷಣ ತೋರಿಸಿರುವ ಅಮೆರಿಕ ಆಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಪಡೆಗಳಿಗೆ ಸಾಮಗ್ರಿ ಸರಬರಾಜಿಗೆ ಪಾಕಿಸ್ತಾನದ ಪ್ರಕ್ಷುಬ್ಧತೆಯಿಂದ ಅಡ್ಡಿಯಾದರೆ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವ ಯೋಜನೆಯನ್ನು ಆರಂಭಿಸಿದೆ.
ಪೂರೈಕೆ ಮಾರ್ಗವು ಪ್ರಸಕ್ತ ಮುಕ್ತವಾಗಿದ್ದರೂ ಅಮೆರಿಕದ ದಂಡಾಧಿಕಾರಿಗಳು ನಿಜವಾದ ಕಳವಳ ವ್ಯಕ್ತಪಡಿಸಿದ್ದಾರೆಂದು ಪೆಂಟಗಾನ್ ವಕ್ತಾರ ಜೆಫ್ ಮೊರೆಲ್ ತಿಳಿಸಿದ್ದಾರೆ. ಏಕೆಂದರೆ ಶೇ.40 ರಷ್ಟು ಇಂಧನ ಪೂರೈಕೆ ಸೇರಿದಂತೆ ಶೇ.75ರಷ್ಟು ಎಲ್ಲ ಸಾಮಗ್ರಿಗಳ ಸರಬರಾಜು ಪಾಕಿಸ್ತಾನದ ಮೂಲಕವೇ ಹಾದುಹೋಗಬೇಕಾಗುತ್ತದೆ.
ನಮ್ಮ ಪೂರೈಕೆ ಮಾರ್ಗವನ್ನು ಬದಲಿಸುವುದು ಅವಶ್ಯಕವಾಗಿದ್ದರೆ, ಬೆಂಬಲಿತ ಯೋಜನೆಯನ್ನು ನಾವು ಖಾತರಿ ಮಾಡಿಕೊಳ್ಳಬೇಕೆಂದು ಹೇಳಿದ ಮೊರೆಲ್ ಪರ್ಯಾಯ ಸರಬರಾಜು ಮಾರ್ಗವನ್ನು ಸ್ಥಾಪಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದರು.
ಈ ಕ್ರಮವು ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಮೇಲೆ ವಿಶ್ವಾಸ ಕಳೆದುಕೊಂಡ ದ್ಯೋತಕವಾಗಿದೆಯೇ ಎಂದು ಹೇಳಲು ಅವರು ನಿರಾಕರಿಸಿದರು. ಅಮೆರಿಕಕ್ಕೆ ಪಾಕಿಸ್ತಾನದ ಅಣ್ವಸ್ತ್ರಗಳ ಸುರಕ್ಷತೆ ಬಗ್ಗೆ ತಕ್ಷಣದ ಕಳವಳ ಇಲ್ಲ ಎಂದು ಪೆಂಟಗಾನ್ ಅಧಿಕಾರಿ ಪ್ರತಿಪಾದಿಸಿದರು. ಅದು ಸೂಕ್ತ ನಿಯಂತ್ರಣದಲ್ಲಿದೆ ಎಂದು ನಂಬಿರುವುದಾಗಿ ಅವರು ನುಡಿದರು.
|