ಸಿಡರ್ ಚಂಡಮಾರುತ ಬಾಂಗ್ಲಾದೇಶದ ಕರಾವಳಿ ಜಿಲ್ಲೆಗಳಿಗೆ ಗುರುವಾರ ರಾತ್ರಿ ಅಪ್ಪಳಿಸಿ ರಾಷ್ಟ್ರದಲ್ಲಿ ವ್ಯಾಪಕ ವಿನಾಶ ಉಂಟುಮಾಡಿದ್ದು ಕನಿಷ್ಠ 62 ಜನರು ಬಲಿಯಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ರಾಷ್ಟ್ರದ 15 ಕರಾವಳಿ ಜಿಲ್ಲೆಗಳಿಗೆ ಗಂಟೆಗೆ 240 ಕಿಮೀ ವೇಗದಲ್ಲಿ ಬೀಸುವ ಚಂಡಮಾರುತ ಅಪ್ಪಳಿಸಿದ್ದರಿಂದ ಉಂಟಾದ ವಿನಾಶದ ಸ್ಪಷ್ಟ ಚಿತ್ರಣ ಲಭ್ಯವಾದ ಕೂಡಲೇ ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ರಕ್ಷಣಾಪಡೆ ತಿಳಿಸಿದೆ.
ಬಾರಿಸಾಲ್‌ನಲ್ಲಿ 21 ಜನರು, ಪಟುಕಾಲಿಯಲ್ಲಿ 19 ಜನರು, ಬಾಗೇರಾಟ್‌ನಲ್ಲಿ 12 ಮಂದಿ, ಭೋಲಾದಲ್ಲಿ 6 ಮಂದಿ ಮತ್ತು ಸಾತ್ಕಿರಾ ಜಿಲ್ಲೆಗಳಲ್ಲಿ 4 ಜನರು ಚಂಡಮಾರುತದ ಪ್ರಕೋಪಕ್ಕೆ ಬಲಿಯಾಗಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
ಮನೆಗಳು ಮತ್ತು ಮರಗಳ ಕುಸಿತದಿಂದ ಅನೇಕ ಸಾವುಗಳು ಸಂಭವಿಸಿದ್ದು, ಸಾವಿರಾರು ಮನೆಗಳು ನೆಲಸಮವಾಗಿವೆ, ಮರಗಳು ಉರುಳಿಬಿದ್ದಿವೆ ಮತ್ತು ಬೆಳೆಗಳಿಗೆ ಹಾನಿಯಾಗಿದೆ. ರೇಡಿಯೊದಲ್ಲಿ ಚಂಡಮಾರುತದ ಬಗ್ಗೆ ಪದೇ ಪದೇ ಮುನ್ನೆಚ್ಚರಿಕೆ ನೀಡಿದ್ದರೂ ಬಂಗಾಳಕೊಲ್ಲಿಯಲ್ಲಿ 100ಕ್ಕೂ ಹೆಚ್ಚು ಮೀನುಗಾರಿಕೆ ದೋಣಿಗಳು ದಡಕ್ಕೆ ತಲುಪಲು ವಿಫಲವಾಗಿವೆ ಎಂದು ರಾಯ್ಟರ್ ವರದಿ ಮಾಡಿದೆ.
ಕಾಕ್ಸ್ ಬಜಾರ್‌ನಲ್ಲಿ ಮೀನುಗಾರಿಕೆ ದೋಣಿ ಮುಳುಗಿ ಅದರಲ್ಲಿದ್ದ 15 ಬಾಂಗ್ಲಾದೇಶಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಮೀನುಗಾರಿಕೆಗೆ ಕಡಲಿಗೆ ಇಳಿದಿದ್ದ ಮಯನ್ಮಾರ್ ಮೀನುಗಾರರನ್ನು ರಕ್ಷಿಸಲಾಗಿದ್ದು, ತಮ್ಮ 12 ಮಂದಿ ಸಂಗಡಿಗರು ಸಮುದ್ರದಲ್ಲಿ ಮುಳುಗಿದ್ದಾರೆ ಎಂದು ಬಾಂಗ್ಲಾದೇಶಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಾಲ್ಕು ದೋಣಿಗಳಲ್ಲಿ ಅವರು ತೆರಳಿದ್ದಾಗ ಅವರ ದೋಣಿಗಳು ಚಂಡಮಾರುತದಿಂದ ದಡಕ್ಕೆ ಅಪ್ಪಳಿಸಿದ್ದವು. ಅನೇಕ ಜಿಲ್ಲೆಗಳಲ್ಲಿ ಚಂಡಮಾರುತದಿಂದ 5 ಮೀಟರ್ ಎತ್ತರದ ಅಲೆಗಳು ಎದ್ದಿವೆಯೆಂದು ಹೇಳಲಾಗಿದೆ.
|