ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಶುಕ್ರವಾರ ಹೇಳಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ಕಾಯ್ದೆ ಅನ್ವಯ ಬುಧವಾರ ಅವರನ್ನು ಬಂಧಿಸಿದ ಬಳಿಕ ಇಮ್ರಾನ್ ಲಂಡನ್‌ನಲ್ಲಿ ತಮ್ಮ ವಕೀಲರಿಗೆ ಎಸ್‍ಒಎಸ್(ಅಪಾಯದ ಸೂಚನೆ) ಕಳಿಸಿದ್ದಾರೆ.
ಮುಷರ್ರಫ್ ಅವರ ಲಂಡನ್ ಮೂಲದ ಮಿತ್ರ ಅಲ್ತಾಫ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಲು ಬ್ರಿಟನ್ ವಿಫಲವಾದರೆ ತಮಗೆ ಮತ್ತು ಕಾರ್ಯಕರ್ತರಿಗೆ ಅಪಾಯ ತಪ್ಪಿದ್ದಲ್ಲ ಎಂದು ಇಮ್ರಾನ್ ಹೇಳಿದ್ದಾರೆ. ಅಲ್ತಾಫ್ ಅವರ ವಿರುದ್ಧ ಬ್ರಿಟನ್ ಭಯೋತ್ಪಾದಕ ವಿರೋಧಿ ಕಾನೂನಿನಡಿ ಕೇಸು ದಾಖಲಿಸಲಾಗಿದ್ದು, ಕರಾಚಿಯಲ್ಲಿ ಇಮ್ರಾನ್ ಬೆಂಬಲಿಗರು ಮತ್ತು ವಕೀಲರ ಮೇಲೆ ಗುಂಡು ಹಾರಿಸಲು ಪ್ರಚೋದನೆ ನೀಡಿದ್ದಾರೆಂದು ಹೇಳಲಾಗಿದೆ.
ನ.3ರಂದು ತುರ್ತುಪರಿಸ್ಥಿತಿ ಹೇರಿದ ಬಳಿಕ ಭೂಗತರಾಗಿದ್ದ ಖಾನ್ ಪಂಜಾಬ್ ವಿವಿ ವಿದ್ಯಾರ್ಥಿಗಳ ಪ್ರತಿಭಟನಾ ರಾಲಿಯಲ್ಲಿ ಪಾಲ್ಗೊಳ್ಳಲು ಬುಧವಾರ ಪ್ರತ್ಯಕ್ಷರಾಗಿದ್ದರು. ತಹ್ರೀಕ್ ಎ ಇನ್ಸಾಫ್ ರಾಜಕೀಯ ಪಕ್ಷದ ನೇತೃತ್ವ ವಹಿಸಿರುವ ಇಮ್ರಾನ್ ಅವರನ್ನು ಬಂಧಿಸಿ ಕೆಟ್ಟದಾಗಿ ನಡೆಸಿಕೊಳ್ಳಲಾಯಿತೆಂದು ಹೇಳಲಾಗಿದ್ದು, ಅವರ ವಿರುದ್ಧ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ.
ಇಮ್ರಾನ್ ಅವರನ್ನು ಬಂಧಿಸಿರುವ ಬಗ್ಗೆ ಅವರ ಬೆಂಬಲಿಗರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಮಾಜಿ ಟೆಸ್ಟ್ ಆಟಗಾರ ಜಾವೇದ್ ಮಿಯಾಂದಾದ್ ಇಮ್ರಾನ್ ಅವರನ್ನು ಬಂಧಿಸಿರುವ ಚಿತ್ರಗಳನ್ನು ನೋಡಿ ತಮಗೆ ಬೇಸರವಾಗಿದೆಯೆಂದು ಹೇಳಿದ್ದಾರೆ. ಅವರನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಜಮಾತೆ ಇಸ್ಲಾಮಿ ವಿದ್ಯಾರ್ಥಿ ದಳವು ಅವರನ್ನು ವಿವಿ ಕ್ಯಾಂಪಸ್ ಕಟ್ಟಡದಲ್ಲಿ 90 ನಿಮಿಷಗಳ ಕಾಲ ಕೂಡಿಹಾಕಿತ್ತು.
1992ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಜಯಿಸಿಕೊಟ್ಟ ಇಮ್ರಾನ್ ಬಂಧನದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ಪ್ರಸಕ್ತ ಕ್ರಿಕೆಟ್ ಪಟುಗಳು ವಿಷಾದ ವ್ಯಕ್ತಪಡಿಸಿದ್ದಾರೆ.
|