ಪಾಕಿಸ್ತಾನದ ಪ್ರತಿಪಕ್ಷದ ನಾಯಕಿ ಬೇನಜೀರ್ ಭುಟ್ಟೊ ಅವರು ಗೃಹಬಂಧನದಿಂದ ಬಿಡುಗಡೆಯಾದ ಬಳಿಕ ಅಧ್ಯಕ್ಷ ಮುಷರ್ರಫ್ ನೇಮಿಸಿದ ಉಸ್ತುವಾರಿ ಸರ್ಕಾರವನ್ನು ಭುಟ್ಟೊ ತಿರಸ್ಕರಿಸಿದ್ದಾರೆ. ನಾವು ಈ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ. ಹಂಗಾಮಿ ಸಾಂವಿಧಾನಿಕ ಆದೇಶದ ಅಡಿಯಲ್ಲಿ ಈ ಸರ್ಕಾರ ಪ್ರಮಾಣ ಸ್ವೀಕರಿಸುವ ಮೂಲಕ ವಂಚನೆ ಎಸಗಿದೆ ಎಂದು ಅವರು ನುಡಿದಿದ್ದಾರೆ.
ಮುಷರ್ರಫ್ ಅವರು ಸಮವಸ್ತ್ರ ತ್ಯಜಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಎಲ್ಲ ಪ್ರತಿಪಕ್ಷಗಳಿಗೆ ಒಪ್ಪಿಗೆಯಾದ ತಟಸ್ಥ ಉಸ್ತುವಾರಿ ಸರ್ಕಾರವನ್ನು ನಾವು ನೋಡಲು ಬಯಸುತ್ತೇವೆ ಎಂದು ಹೇಳಿದ ಭುಟ್ಟೊ ಅಂತಹ ಸರ್ಕಾರದಿಂದ ಮಾತ್ರ ನ್ಯಾಯಯುತ ಚುನಾವಣೆ ಖಾತರಿ ಸಾಧ್ಯವೆಂದು ಹೇಳಿದರು.
ಮುಷರ್ರಫ್ ಶುಕ್ರವಾರಮೊಹಮ್ಮಡನ್ ಸೂಮ್ರೊ ಅವರನ್ನು ಪಾಕಿಸ್ತಾನದ ಉಸ್ತುವಾರಿ ಪ್ರಧಾನಮಂತ್ರಿಯಾಗಿ ನೇಮಿಸಿ ಅವರ ನೇತೃತ್ವದಲ್ಲಿ ಹೊಸ ಕ್ಯಾಬಿನೆಟ್ ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿದ್ದರು.
ಮಿಲಿಟರಿ ಜನರಲ್ ಅವರ ನಿಷ್ಠ ಬೆಂಬಲಿಗರೆಂದು ಹೇಳಲಾದ ಸೂಮ್ರೋ ಜನವರಿ ಮೊದಲವಾರ ನಡೆಯಬಹುದೆಂದು ಹೇಳಲಾದ ಚುನಾವಣೆಯ ಉಸ್ತುವಾರಿ ವಹಿಸಲಿದ್ದಾರೆ.
|