ಶಾಂತಿ ಉದ್ದೇಶಕ್ಕಾಗಿ ಪರಮಾಣು ಶಕ್ತಿ ಕಾರ್ಯಕ್ರಮವನ್ನು ಅಭಿವೃದ್ಧಿಗೊಳಿಸಲು ತೈಲ ಸಮೃದ್ಧ ರಾಷ್ಟ್ರ ಮುಂದಾಗಿದೆ ಎಂದು ವೆನೆಜುಯೆಲಾದ ರಾಷ್ಟ್ರಾಧ್ಯಕ್ಷ ಹ್ಯೂಗೊ ಚಾವೇಜ್ ಹೇಳಿರುವುದಾಗಿ ಸ್ಪಾನಿಷ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬ್ರೆಜಿಲ್ ಹಾಗೂ ಅರ್ಜೆಂಟಿನಾಗಳ ಮಾದರಿಯಂತೆಯೇ ವೆನೆಜುಯೆಲಾ ರಾಷ್ಟ್ರವು ಶಾಂತಿ ಉದ್ದೇಶಕ್ಕಾಗಿ ಪರಮಾಣು ಶಕ್ತಿ ಕಾರ್ಯಕ್ರಮ ಪ್ರಾರಂಭಿಸಲು ಇಚ್ಛಿಸಿದೆ' ಎಂದು ಖಾಸಗಿ ಟಿವಿ ವಾಹಿನಿಯೊಂದಿಗೆ ನಡೆದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇರಾನ್ ಅಣು ಬಾಂಬ್ ತಯಾರಿಕೆಗಾಗಿ ಅಣುಶಕ್ತಿ ಕಾರ್ಯಕ್ರಮಕ್ಕೆ ಮುಂದಾಗಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ ಚಾವೇಜ್ ಅವರು, ಪರಮಾಣು ಶಕ್ತಿಯು ಜಗತ್ತು ಎದುರಿಸುತ್ತಿರುವ ಇಂಧನ ಶಕ್ತಿಗೆ ಪರಿಹಾರವನ್ನು ಮಾತ್ರ ನೀಡದೆ, ಜಾಗತಿಕ ಹವಾಮಾನ ಬದಲಾವಣೆ ಹಾಗೂ ವಾಯು ಮಾಲಿನ್ಯಕ್ಕೆ ತಕ್ಕ ಉತ್ತರ ನೀಡಬಲ್ಲುದು ಎಂದು ಚಾವೇಜ್ ಹೇಳಿದರು.
ವಿಶ್ವದ 6ನೇ ತೈಲ ರಫ್ತು ರಾಷ್ಟ್ರ ಹಾಗೂ ಅಮೆರಿಕದ ಪ್ರಮುಖ ತೈಲ ರಫ್ತು ರಾಷ್ಟ್ರವಾಗಿರುವ ವೆನೆಜುಯೆಲಾವು, ಈಗ ಯುರೇನಿಯಂ ಸಂಗ್ರಹಣೆಗೆ ಚಿಂತನೆ ನಡೆಸುತ್ತಿದೆ.
ಇಂದು ಹಲವಾರು ರಾಷ್ಟ್ರಗಳು ಹಲವು ಬಗೆಯ ಶಕ್ತಿಗಳನ್ನು ಬಳಸಿಕೊಳ್ಳುತ್ತಿವೆ ಎಂದ ಅಧ್ಯಕ್ಷರು, ಇದು ತುಂಬಾ ಅವಶ್ಯಕ ಎಂದು ನಾನು ಭಾವಿಸಿದ್ದೇನೆ ಎಂದರು.
ರಿಯಾದ್‌ನಲ್ಲಿ ಶನಿವಾರದಂದು ಪ್ರಾರಂಭವಾಗಿರುವ ಒಪೆಕ್ (ಪೆಟ್ರೋಲಿಯಂ ರಫ್ತು ಸಂಘಟನಾ ರಾಷ್ಟ್ರಗಳು) ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ, ಸೌದಿ ಅರೇಬಿಯಾ, ಫ್ರಾನ್ಸ್ ದೇಶಗಳನ್ನು ಭೇಟಿ ಮಾಡಿರುವ ಅವರು ಈ ರೀತಿಯಾಗಿ ವಿವರಿಸಿದರು.
|