ಪಾಕಿಸ್ತಾನದಲ್ಲಿ ಹೇರಿರುವ ತುರ್ತು ಪರಿಸ್ಥಿತಿಯನ್ನು ಶೀಘ್ರದಲ್ಲೇ ಅಂತ್ಯಗೊಳಿಸಿ, ಪ್ರಜಾಪ್ರಭುತ್ವವನ್ನುಮರಳಿ ಸ್ಥಾಪಿಸಬೇಕೆಂಬ ಅಮೆರಿಕಾ ಒತ್ತಡಕ್ಕೆ ಪಾಕ್ ಅಧ್ಯಕ್ಷ ಫರ್ವೇಜ್ ಮುಷರಫ್ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಪಾಕ್ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ನೆಗ್ರೊ ಪೊಂಟೆ ಅವರು, ಶನಿವಾರ ಮುಷರಫ್ ಅವರೊಂದಿಗೆ ಎರಡು ಗಂಟೆಗಳಿಗೂ ಹೆಚ್ಚು ಸಮಾಲೋಚನೆ ನಡೆಸಿದ್ದು, ತುರ್ತು ಪರಿಸ್ಥಿತಿಯನ್ನು ಹಿಂತೆದುಕೊಳ್ಳುವಂತೆ ಮನವಿ ಮಾಡಿದರೆನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಷರಫ್, ತುರ್ತು ಪರಿಸ್ಥಿತಿ ಹಿಂತೆಗೆದುಕೊಳ್ಳುವುದಕ್ಕಿಂತ, ದೇಶದಲ್ಲಿ ಭಯೋತ್ಪಾದನೆಯನ್ನು ದಮನ ಮತ್ತು ನ್ಯಾಯ ಸಮ್ಮತ ಚುನಾವಣೆ ಏರ್ಪಡಿಸುವುದು ನನ್ನ ಮುಂದಿರುವ ದೊಡ್ಡ ಸವಾಲಾಗಿವೆ ಎಂದು ಮಾರುತ್ತರ ನೀಡಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಹಿಂಪಡೆದುಕೊಳ್ಳಬೇಕು ಮತ್ತು ಸೇನಾ ಮುಖ್ಯಸ್ಥರ ಹುದ್ದೆಯಿಂದ ಕೆಳಗಿಳಿಯಬೇಕೆಂದು ಅಮೆರಿಕಾದ ಅಧ್ಯಕ್ಷ ಬುಷ್ ಪಾಕ್ ಅಧ್ಯಕ್ಷ ಮುಷರಫ್ ಅವರಿಗೆ ಸಂದೇಶ ರವಾನಿಸಿದ್ದು, ಮುಷರಫ್ ಈ ಸೂತ್ರಗಳಿಗೆ ಒಪ್ಪದಿರುವುದು ಅಮೆರಿಕಕ್ಕೆ ಮುಖಭಂಗವಾದಂತಾಗಿದೆ.
ಈ ಕುರಿತು ಹೇಳಿಕೆ ನೀಡಲು ಅಮೆರಿಕನ್ ಅಧಿಕಾರಿಗಳು ನಕಾರ ವ್ಯಕ್ತಪಡಿಸಿದರೆ, ಮುಷರಫ್ ಬೆಂಬಲಿಗರು ಮಾಧ್ಯಮದೆದುರು ಮಾತನಾಡಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಥಿತಿಗೆ ಬರುವತನಕ ತುರ್ತು ಪರಿಸ್ಥಿತಿ ಮುಂದುವರೆಸುವುದಾಗಿ ಮುಷರಫ್ ಹೇಳಿಕೆಯನ್ನು ಉಲ್ಲೇಖಿದ್ದಾರೆ.
|