ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯನ್ನು ಜನವರಿ 8ರಂದು ನಡೆಸಲಾಗುವುದು ಮತ್ತು ಹಿಂದಿನಂತೆ ಈ ಬಾರಿ ಸೇನೆಯನ್ನು ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವುದಿಲ್ಲ ಎಂದು ಅಧ್ಯಕ್ಷ ಪರ್ವೇಜ್ ಮುಷರ್ರಫ್ ಭಾನುವಾರ ತಿಳಿಸಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ನಿವಾಸದಲ್ಲಿ ಸಿಂಧ್ ಪ್ರಾಂತ್ಯದ ನಿರ್ಗಮಿಸುವ ಅಸೆಂಬ್ಲಿ ಸದಸ್ಯರಿಗೆ ಬೀಳ್ಕೊಡುಗೆ ಔತಣಕೂಟದಲ್ಲಿ ಮಾತನಾಡುತ್ತಿದ್ದ ಅವರು ಮೇಲಿನ ವಿಷಯವನ್ನು ತಿಳಿಸಿದರು.
ತಾವು ಈ ಬಗ್ಗೆ ಚುನಾವಣೆ ಆಯೋಗಕ್ಕೆ ಅದೇ ದಿನದಂದು ಚುನಾವಣೆ ನಡೆಸಲು ಶಿಫಾರಸು ಮಾಡುವುದಾಗಿ ಅವರು ಹೇಳಿದರು. ಇದಕ್ಕೆ ಮುನ್ನ ಟೆಲಿವಿಷನ್ ಸಂದರ್ಶನದಲ್ಲಿ ಮಾತನಾಡಿದ ಅವರು,ಹಿಂದಿನ ಬಾರಿ ಸೇನೆಯನ್ನು ಕರೆಸಿದಂತೆ ಈ ಬಾರಿ ಚುನಾವಣೆ ನಿರ್ವಹಣೆಗೆ ಸೇನೆಯನ್ನು ಕರೆಸುವುದಿಲ್ಲ ಎಂದು ಹೇಳಿದರಲ್ಲದೇ, ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂದು ಹೇಳಿದರು.
ಕರಾಚಿಯಲ್ಲಿ ಇನ್ನೊಂದು ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಷರ್ರಫ್ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿರುವ ವಿರೋಧ ಪಕ್ಷಗಳನ್ನು ಟೀಕಿಸಿದರು. ತಾವು ಗೆಲ್ಲುವುದಿಲ್ಲವೆಂದು ಖಚಿತವಾದ ಬಳಿಕ ಅವರು ಪಲಾಯನ ಮಾಡುತ್ತಿದ್ದಾರೆಂದು ಹೇಳಿದರು.
ಮುಷರ್ರಫ್ ಯಾರನ್ನೂ ಹೆಸರಿದಿದ್ದರೂ ಅವರ ಟೀಕೆಯು ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಅವರನ್ನು ಉದ್ದೇಶಿಸಿದೆ ಎನ್ನುವುದು ಸ್ಪಷ್ಟವಾಗಿದೆ.
|