ಪೂರ್ವ ಉಕ್ರೇನಿನ ಕಲ್ಲಿದ್ದಲು ಗಣಿಯಲ್ಲಿ ಭಾನುವಾರ ಮುಂಜಾನೆ ಮೀಥೇನ್ ಸ್ಫೋಟದಿಂದ ಕನಿಷ್ಠ 63 ಗಣಿ ಕಾರ್ಮಿಕರು ಸತ್ತಿದ್ದಾರೆ. ಸುಮಾರು 360 ಗಣಿಕಾರ್ಮಿಕರನ್ನು ಅಪಘಾತದಿಂದ ಪಾರು ಮಾಡಲಾಗಿದೆ. 37 ಜನರು ಗಣಿಯೊಳಗೆ ಸಿಕ್ಕಿಬಿದ್ದು, ಉರಿಯುವ ಅಗ್ನಿಜ್ವಾಲೆಯಿಂದ ಅವರನ್ನು ರಕ್ಷಿಸುವ ಪ್ರಯತ್ನಕ್ಕೆ ಅಡ್ಡಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 3,300 ಅಡಿ ಆಳದ ಜಾಸ್ಯಾಡ್ಕೊ ಗಣಿಯ ಅತೀ ಒಳಭಾಗದಲ್ಲಿ ನಸುಕಿನ 3 ಗಂಟೆಗೆ ಸ್ಫೋಟ ಸಂಭವಿಸಿತು. ಉಕ್ರೇನ್‌ನಲ್ಲಿ ಕಳೆದ 7 ವರ್ಷಗಳಲ್ಲಿ ಅತ್ಯಂತ ಭೀಕರ ಎಂದು ಹೇಳಲಾದ ಈ ಅಪಘಾತವು ವಿಶ್ವದ ಅತ್ಯಂತ ಅಪಾಯದ ಗಣಿಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಗಣಿಗಳಲ್ಲಿ ಸುರಕ್ಷತೆಯ ಕೊರತೆಯ ಬಗ್ಗೆ ಗಮನಸೆಳೆಯುತ್ತದೆ.
ಗಣಿಗಾರಿಕೆಯ ಸುಧಾರಣೆಗೆ ಸಾಕಷ್ಟು ಕೆಲಸ ಮಾಡದಿರುವ ಬಗ್ಗೆ ಅಧ್ಯಕ್ಷ ವಿಕ್ಟರ್ ಯುಶ್ಚೆಂಕೊ ತಮ್ಮ ಸಚಿವಸಂಪುಟವನ್ನು ದೂಷಿಸಿದ್ದು, ಅಪಘಾತದ ತನಿಖೆಗೆ ಅಧಿಕೃತ ಸಮಿತಿಯನ್ನು ರಚಿಸುವಂತೆ ಆದೇಶಿಸಿದ್ದಾರೆ.
ಮೀಥೇನ್ ಗಣಿಗಾರಿಕೆಯ ನೈಸರ್ಗಿಕ ಉಪಉತ್ಪನ್ನವಾಗಿದ್ದು, ಗಣಿ ಆಳವಾಗಿದ್ದಷ್ಟೂ ಅವರ ಸಾಂದ್ರತೆ ಹೆಚ್ಚಾಗಿರುತ್ತದೆ. ಅತ್ಯಧಿಕ ಮೀಥೇನ್ ಸಾಂದ್ರತೆಯಿಂದ ಉಕ್ರೇನ್‌ನ 200ಕ್ಕೂ ಹೆಚ್ಚು ಕಲ್ಲಿದ್ದಲು ಗಣಿಗಳನ್ನು ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.
|