ನಕಲಿ ಬಾಲಕನ ಹೆಸರಿನಲ್ಲಿ ಆನ್‌ಲೈನ್ ಸಂದೇಶಗಳನ್ನು ಕಳಿಸಿ ಬಾಲಕಿಯೊಬ್ಬಳ ಸ್ನೇಹ ಸಂಪಾದಿಸಿ ಬಳಿಕ ಅವಳನ್ನು ತಿರಸ್ಕರಿಸಿದಾಗ ಅವಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಾಲಕ ಜೋಶ್ ಎಂಬವನು ಮೈಸ್ಪೇಸ್ ಆನ್‌ಲೈನ್ ಮೂಲಕ ಮೆಗಾನ್ ಮೈಯರ್ ಎಂಬ 13 ವರ್ಷ ಪ್ರಾಯದ ಬಾಲಕಿಯನ್ನು ಸಂಪರ್ಕಿಸಿ ಸಂದೇಶಗಳನ್ನು ಕಳಿಸಲು ಆರಂಭಿಸಿದಾಗ ಅವಳು ಹರ್ಷಿತಳಾದಳು.
ತನಗೆ ಹೊಸ ಸ್ನೇಹಿತನೊಬ್ಬ ಸಿಕ್ಕಿದನೆಂದು ಅವಳು ಭಾವಿಸಿದಳು. ಸಾಮಾಜಿಕ ನೆಟ್‌ವರ್ಕಿಂಗ್ ವೆಬ್‌ಸೈಟ್ ಮೈಸ್ಪೇಸ್ ಮೂಲಕ ತಮ್ಮ ಮಗಳು ಒಳ್ಳೆಯ ಸ್ನೇಹವನ್ನು ಮಾಡಿಕೊಂಡಳೆಂದು ಅವಳ ಪೋಷಕರು ಭಾವಿಸಿದರು. ಖಿನ್ನತೆ ಮತ್ತು ಏಕಾಗ್ರತೆಯ ಕೊರತೆಯಿಂದ ನರಳುತ್ತಿದ್ದ ಈ ಬಾಲಕಿಯು ಗೆಳೆಯ ಜೋಷ್ ಜತೆ ಸುಮಾರು ಒಂದು ತಿಂಗಳವರೆಗೆ ಆನ್‌ಲೈನ್ ಪತ್ರವ್ಯವಹಾರ ಇಟ್ಟುಕೊಂಡಳು.
ಆದರೆ ಜೋಷ್ ಇದ್ದಕ್ಕಿದ್ದಂತೆ ಅವಳ ಸ್ನೇಹವನ್ನು ಸಮಾಪ್ತಿಗೊಳಿಸಿ ಅವಳು ತುಂಬ ಕ್ರೂರಿಯಾಗಿರುವುದರಿಂದ ಸ್ನೇಹಕ್ಕೆ ಗುಡ್‌ಬೈ ಹೇಳಿದ್ದಾಗಿ ತಿಳಿಸಿದ. ಮರುದಿನವೇ ಮೆಗಾನ್ ಆತ್ಮಹತ್ಯೆಗೆ ಶರಣಾಗಿದ್ದಳು. ಮೆಗಾನ್ ಸತ್ತ ಬಳಿಕ ಮೆಗಾನ್ ಕುಟುಂಬಕ್ಕೆ ಜೋಷ್ ಎಂಬ ಬಾಲಕನ ಅಸ್ತಿತ್ವವೇ ಇರಲಿಲ್ಲ ಎಂಬ ವಿಷಯ ಬೆಳಕಿಗೆ ಬಂತು .
ಮೆಗಾನ್‌ಳ ಮಾಜಿ ಸ್ನೇಹಿತೆಯೊಬ್ಬಳು ಸೇರಿದಂತೆ ನೆರೆಯ ಕುಟುಂಬವೊಂದು ನಕಲಿ ಹೆಸರಿನಲ್ಲಿ ಮೆಗಾನ್‌ಗೆ ಪ್ರೇಮದ ಸಂದೇಶಗಳನ್ನು ಕಳಿಸುತ್ತಿದ್ದರು. ಸಾಮಾಜಿಕ ನೆಟ್‌ವರ್ಕಿಂಗ್ ವೆಬ್‌ಸೈಟಿನಲ್ಲಿ ನಕಲಿ ವಿವರಗಳನ್ನು ಸಲ್ಲಿಸಿದ ಜನರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಮೆಗಾನ್ ಪೋಷಕರು ಈಗ ಒತ್ತಾಯಿಸಿದ್ದಾರೆ. ಇಂಟರ್‌ನೆಟ್‌ನಲ್ಲಿ ವ್ಯವಹಾರ ಇಟ್ಟುಕೊಳ್ಳುವ ಮಕ್ಕಳ ರಕ್ಷಣೆಗೆ ಕಾನೂನಿನಲ್ಲಿ ಮಾರ್ಪಾಟು ಮಾಡಬೇಕೆಂದು ಅವರು ಕೋರಿದ್ದಾರೆ.
|