ಕಾಂಬೋಡಿಯದಲ್ಲಿ ಮಾರಣಹೋಮದ ಮೂಲಕ ರಕ್ತದಓಕುಳಿ ಹರಿಸಿದ ಕೇಮರ್ ರೋಗ್ ಆಡಳಿತದ ಬದುಕುಳಿದ ಸದಸ್ಯರ ಸಾರ್ವಜನಿಕ ವಿಚಾರಣೆಯನ್ನು ಅಂತಾರಾಷ್ಟ್ರೀಯ ನ್ಯಾಯಮಂಡಳಿ ಆರಂಭಿಸಿದೆ. ಕೈದಿಗಳ ಮಾರಣಹೋಮ ಮಾಡಿದ ಕುಖ್ಯಾತ ಜೈಲಿನ ಮಾಜಿ ಮುಖ್ಯಸ್ಥ ಡಕ್ ಅಥವಾ ಕಾಂಗ್ ಕೇಕ್ ಲಿಯು ಎಂಬಾತನ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶ್ವಸಂಸ್ಥೆ ಬೆಂಬಲಿತ ಕೋರ್ಟ್ ನಡೆಸುತ್ತಿದೆ.
1975ರಿಂದ 1979ರ ನಡುವೆ ಕೇಮರ್ ರೋಗ್ ಆಡಳಿತಾವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಹಿಂಸಾಕಾಂಡಕ್ಕೆ ಬಲಿಯಾಗಿದ್ದಾರೆಂದು ಹೇಳಲಾಗಿದೆ. ಈ ವಿಚಾರಣೆಯನ್ನು ಮೈಲಿಗಲ್ಲು ಎಂದು ನ್ಯಾಯಮಂಡಳಿಯ ವಕ್ತಾರ ಬಣ್ಣಿಸಿದ್ದಾರೆ.
ಕಾಂಬೋಡಿಯದಲ್ಲಿ ನಾಲ್ಕು ವರ್ಷಗಳ ಕಾಲದ ಮಾವೋವಾದಿ ಕೇಮರ್ ರೋಗ್ ಆಡಳಿತದಲ್ಲಿ ಹಸಿವು, ಅಧಿಕ ಕೆಸಲಸ ಮತ್ತು ನೇಣು ಶಿಕ್ಷೆಯಿಂದ 10 ಲಕ್ಷಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಕೇಮರ್ ರೋಗ್ ಆಡಳಿತದ ಸಂಸ್ಥಾಪಕ ಪಾಲ್ ಪಾಟ್ ನಾಮ್ ಪೆನ್‌ನ ಟುಲ್ ಸ್ಲೆಂಗ್ ಜೈಲಿನಲ್ಲಿ ಸಾವಿರಾರು ಜನರಿಗೆ ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದ.
ಕೇಮರ್ ರೋಗ್‌ನ ಮಾಜಿ ಜೈಲರ್‌ನ ಬಿಡುಗಡೆ ಸಂಭವವಿಲ್ಲ. ಆದರೆ ಕೋರ್ಟ್‌ನಲ್ಲಿ ಅವರ ಉಪಸ್ಥಿತಿಯು ನ್ಯಾಯಮಂಡಳಿ ಮುಂದಡಿಯಿಡುತ್ತಿರುವ ದ್ಯೋತಕವಾಗಿದೆ. ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಾಂಬೋಡಿಯನ್ನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
|