ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ತಳ್ಳಲಾಗಿದ್ದ 3000ಕ್ಕೂ ಹೆಚ್ಚು ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಒಳಾಡಳಿತ ಸಚಿವಾಲಯ ಮಂಗಳವಾರ ತಿಳಿಸಿದೆ. ತನ್ನ ವಿರೋಧಿಗಳ ವಿರುದ್ಧ ಕಠೋರ ಕ್ರಮಗಳ ಸಡಿಲಿಕೆಯ ಇತ್ತೀಚಿನ ಲಕ್ಷಣ ಇದಾಗಿದೆ. ಒಳಾಡಳಿತ ಸಚಿವಾಲಯದ ವಕ್ತಾರ ಜಾವೇದ್ ಇಕ್ವಾಲ್ ಚೀಮಾ ವಕೀಲರು ಮತ್ತು ರಾಜಕೀಯ ಕಾರ್ಯಕರ್ತರು ಸೇರಿದಂತೆ ಬಿಡುಗಡೆಯಾದ ಜನರು 3416 ಎಂದು ನಿಖರ ಸಂಖ್ಯೆ ನೀಡಿದ್ದಾರೆ.
ಇನ್ನೂ 2000 ಜನರು ಜೈಲಿನಲ್ಲಿ ಬಂಧಿತರಾಗಿದ್ದಾರೆಂದು ಅವರು ನುಡಿದರು. ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಜೈಲಿನಲ್ಲಿರುವವರನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರ ಬಿಡುಗಡೆ ದೀರ್ಘ ಸಮಯ ಹಿಡಿಯಬಹುದು ಎಂದು ಅವರು ನುಡಿದರು.
ಸೌದಿ ಅರೇಬಿಯಕ್ಕೆ ಮಂಗಳವಾರ ತೆರಳಿರುವ ಮುಷರ್ರಫ್ ಪ್ರತಿಪಕ್ಷದ ನಾಯಕರನ್ನು ಬಿಡುಗಡೆ ಮಾಡುವಂತೆ, ಮಾಧ್ಯಮದ ನಿರ್ಬಂಧಗಳನ್ನು ತೆಗೆಯುವಂತೆ ಮತ್ತು ನೇನಾ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅಮೆರಿಕದಿಂದ ತೀವ್ರ ಒತ್ತಡ ಎದುರಿಸುತ್ತಿದ್ದಾರೆ.
|