ಭಯೋತ್ಫಾದನಾ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿತರಾಗಿದ್ದ, ಪಾಕಿಸ್ತಾನದ ಪ್ರಮುಖ ರಾಜಕೀಯ ಪಕ್ಷವೊಂದರ ಸಂಸ್ಥಾಪಕ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಬುಧವಾರ ರಾತ್ರಿ ಬಿಡುಗಡೆಗೊಂಡಿದ್ದಾರೆ.
ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ, ಲಾಹೋರ್ ವಿಶ್ವವಿದ್ಯಾಲಯ ವಿಧ್ಯಾರ್ಥಿಗಳೊಂದಿಗೆ ಪ್ರತಿಭಟನೆಗಿಳಿದ್ದ ಇಮ್ರಾನ್ ಅವರನ್ನು ಪಾಕ್ ಸೇನೆ, ಒಂದು ವಾರದ ಹಿಂದೆ ಬಂಧಿಸಿ, ಭಯೋತ್ಫಾದನಾ ನಿಗ್ರಹ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಲಾಗಿತ್ತು.
ಆದರೆ, ಖಾನ್ ಅವರು ಪಾಕ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಒತ್ತಾಯಿಸಿ, ಪಂಜಾಬ್ ಪ್ರಾಂತ್ಯದ ದೇರಾ ಘಾಜಿ ಖಾನ್ ಜೈಲಲ್ಲೇ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನಾರಂಭಿಸಿದ್ದರು.
ಇಮ್ರಾನ್ ಖಾನ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದು ನಿಖರ ಮಾಹಿತಿಯಾಗಿದ್ದು, ಅವರೀಗ ದೇರಾ ಘಾಜಿ ಖಾನ್‌ನಲ್ಲಿ ಪಿಎಎಲ್-ಎನ್ ನಾಯಕ ಝುಲ್ಫಿಕರ್ ಖೋಸಾ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಹೆಚ್ಚುವರಿ ಕಾರ್ಯದರ್ಶಿ ಜವೈದ್ ಇಕ್ಬಾಲ್ ತಿಳಿಸಿದ್ದಾರೆ.
ಇಮ್ರಾನ್ ಬಂಧನದಿಂದ ಬಿಡುಗಡೆಗೊಂಡರೂ ಸಹ ಅವರು ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದವರು ಹೇಳಿದರು.
|