ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ಸಮವಸ್ತ್ರದಲ್ಲಿ ಮರುಆಯ್ಕೆಯಾಗಿದ್ದನ್ನು ಪ್ರಶ್ನಿಸಿದ ಅರ್ಜಿಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ಗುರುವಾರ ತಳ್ಳಿಹಾಕಿದೆ. ಸೇನಾ ಮುಖ್ಯಸ್ಥರಾಗಿರುವಾಗಲೇ ಮುಷರ್ರಫ್ ಅಧ್ಯಕ್ಷರಾಗಿ ಆಯ್ಕೆಯನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಿಂದ ಕೆಲವೇ ದಿನಗಳು ಬಾಕಿ ಇರುವಂತೆಯೇ ಮುಷರ್ರಫ್ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದರು.
ಪಾಕಿಸ್ತಾನದ ಅಧ್ಯಕ್ಷರಾಗಿ ಅವರ ಮುಂದುವರಿಕೆ ಬಗ್ಗೆ ಅನುಕೂಲಕರ ತೀರ್ಪು ಬಂದ ಬಳಿಕ ಈ ವಾರಾಂತ್ಯದಲ್ಲಿ ಅಧ್ಯಕ್ಷರಾಗಿ ಅವರು ಹೊಸದಾಗಿ ಪ್ರಮಾಣ ಸ್ವೀಕರಿಸಲಿದ್ದಾರೆಂದು ಪಾಕಿಸ್ತಾನ ಅಟಾರ್ನಿ ಜನರಲ್ ಮಲ್ಲಿಕ್ ಮೊಹಮ್ಮದ್ ಕಯ್ಯೂಮ್ ಬುಧವಾರ ತಿಳಿಸಿದರು. ಇದಕ್ಕೆ ಮುಂಚೆ ಅವರು ಐಎಸ್‌ಐ ಮಾಜಿ ಮುಖ್ಯಸ್ಥ ಕಿಯಾನಿ ಹೆಸರನ್ನು ಸೇನಾ ಮುಖ್ಯಸ್ಥರ ಹುದ್ದೆಗೆ ಶಿಫಾರಸು ಮಾಡಿದ್ದರು.
ತುರ್ತುಪರಿಸ್ಥಿತಿ ಹೇರಿಕೆಗೆ ಮೂಲಭೂತವಾದಿಗಳು ಮತ್ತು ಕಾನೂನು ಹದಗೆಟ್ಟ ಕಾರಣಗಳನ್ನು ಮುಷರ್ರಫ್ ನೀಡಿದರೂ ರಾಷ್ಟ್ರದ ಮುಖ್ಯಸ್ಥರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಷರ್ರಫ್ ತುರ್ತುಪರಿಸ್ಥಿತಿ ಹೇರಲು ಕಾರಣವೆಂದು ವ್ಯಾಪಕವಾಗಿ ನಂಬಲಾಗಿದೆ. ಆಗಿನಿಂದ ಜನರಲ್ ಅಮೆರಿಕ ಸೇರಿದಂತೆ ಎಲ್ಲ ಭಾಗಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಏತನ್ಮಧ್ಯೆ, ಮಾಜಿ ಪ್ರಧಾನಮಂತ್ರಿ ಬೇನಜೀರ್ ಜತೆ ಒಪ್ಪಂದ ಕೂಡ ಮುರಿದುಬಿದ್ದಿದ್ದು, ಇನ್ನೊಬ್ಬರು ಮಾಜಿ ಪ್ರಧಾನಿ ನವಾಜ್ ಷರೀಫ್ ಸಾಮಿಪ್ಯಕ್ಕೆ ಮುಷರ್ರಫ್ ಒಲವು ವ್ಯಕ್ತಪಡಿಸಿದ್ದಾರೆ.
|