ಬಿಗಿ ನಿಲುವು ತಳೆದಿರುವ ಕಾಮನ್‌ವೆಲ್ತ್ ಸಮೂಹ ರಾಷ್ಟ್ರಗಳ ಜಂಟಿ ಕ್ರೀಯಾ ಸಮಿತಿಯು ಕಂಪಾಲಾದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನವನ್ನು ಕಾಮನ್‌ವೆಲ್ತ್ ರಾಷ್ಟ್ರಗಳ ಓಕ್ಕೂಟದಿಂದ ಪದಚ್ಯುತಿಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿವೆ.
ತುರ್ತು ಪರಿಸ್ಥಿತಿಯನ್ನು ಹಿಂದೆಗೆದುಕೊಳ್ಳುವಲ್ಲಿ ಪರ್ವೇಜ್ ಮುಷರಫ್ ಅವರು ವಿಫಲರಾಗಿದ್ದು, ಪಾಕಿಸ್ತಾನದಲ್ಲಿ ಪುನಃ ಪ್ರಜಾಪ್ರಭುತ್ವ ಜಾರಿಗೆ ಬರುವವರೆಗೆ ಅಮಾನತ್ತು ಆದೇಶ ಜಾರಿಯಲ್ಲಿರುತ್ತದೆ ಎಂದು ಒಂಬತ್ತು ದೇಶಗಳ ವಿದೇಶಾಂಗ ಸಚಿವರನ್ನು ಒಳಗೊಂಡ ಕಾಮನ್‌ವೆಲ್ತ್ ಜಂಟಿ ಕ್ರೀಯಾ ಸಮಿತಿ ಹೇಳಿದೆ.
ಇದಕ್ಕೂ ಮೊದಲು 1999ರಲ್ಲಿ ನಡೆದ ರಕ್ತರಹಿತ ಕ್ರಾಂತಿಯ ನಂತರ 53 ರಾಷ್ಟ್ರಗಳ ಕಾಮನ್‌ವೆಲ್ತ್ ಓಕ್ಕೂಟವು ಪಾಕಿಸ್ತಾನವನ್ನು ಸದಸ್ಯತ್ವದಿಂದ ಅಮಾನತ್ತುಗೊಳಿಸಿತ್ತು. ನಂತರ ಪ್ರಜಾಪ್ರಭುತ್ವದ ಜಾರಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ 2004ರಲ್ಲಿ ಪಾಕಿಸ್ತಾನ ಪುನಃ ಕಾಮನ್‌ವೆಲ್ತ್ ಓಕ್ಕೂಟದಲ್ಲಿ ಸ್ಥಾನ ಪಡೆದಿತ್ತು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮ್ಯಾಕಿನನ್ ಅವರು ನವಂಬರ್ 12ರಂದು ತುರ್ತುಪರಿಸ್ಥಿತಿ ಹಿಂದೆಗೆತಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಅಂತಿಮ ಗಡುವನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಓಕ್ಕೂಟದ ಮೂಲತತ್ವಗಳಾದ ಸ್ವತಂತ್ರ ನ್ಯಾಯಾಂಗ, ಕಾನೂನಿನ ಆಡಳಿತ ಮತ್ತು ಪ್ರಜಾಪ್ರಭುತ್ವಗಳನ್ನು ಪಾಕಿಸ್ತಾನದಲ್ಲಿ ಹತ್ತಿಕ್ಕಲಾಗಿದೆ. ಆದ್ದರಿಂದ ಪಾಕಿಸ್ತಾನವನ್ನು ಓಕ್ಕೂಟದಿಂದ ಅಮಾನತ್ತು ಗೊಳಿಸಲಾಗಿದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಯ ವಿಚಾರದಲ್ಲಿ ಓಕ್ಕೂಟ, ಆ ದೇಶಕ್ಕೆ ಅವಶ್ಯವಿರುವ ಎಲ್ಲ ಸಹಾಯ, ಸಹಕಾರಗಳನ್ನು ನೀಡಲು ಬದ್ಧವಾಗಿದ್ದು, ಜನೆವರಿ 2008ರಲ್ಲಿ ನಡೆಯುವ ಸಂಸದೀಯ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಮುಂದಿನ ಕ್ರಮತೆಗೆದುಕೊಳ್ಳಲಾಗುವುದು ಎಂದು ಮ್ಯಾಕಿನನ್ ಹೇಳಿದ್ದಾರೆ.
|