ಸುಮಾರು 30 ಜನರು ಪ್ರಯಾಣಿಸುತ್ತಿದ್ದ ಬಸ್ಸೊಂದು ಭೂಕುಸಿತದಿಂದ ನಜ್ಜುಗುಜ್ಜಾದ ಘಟನೆ ಮಧ್ಯ ಚೀನದಲ್ಲಿ ಸಂಭವಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ. ಮಂಗಳವಾರದಿಂದ ವಾಹನ ನಾಪತ್ತೆಯಾಗಿದೆ ಎಂದು ಅದರ ಮಾಲೀಕತ್ವ ಹೊಂದಿರುವ ಕಂಪೆನಿ ದೂರು ನೀಡಿದ ಬಳಿಕ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಯಾರೂ ಬದುಕುಳಿದ ಲಕ್ಷಣ ಕಂಡುಬಂದಿಲ್ಲ.
ಬಸ್ಸಿನಲ್ಲಿ 27 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಟಿಕೆಟ್ ಮಾರಾಟಗಾರ ಇದ್ದನೆಂದು ಅಧಿಕೃತ ಕ್ಸಿನುವಾ ಸುದ್ದಿಸಂಸ್ಥೆಯು ಬಸ್ ಕಂಪೆನಿ ಅಧಿಕಾರಿಯನ್ನು ಉಲ್ಲೇಖಿಸಿ ಹೇಳಿದೆ.
ಶಾಂಗಾಯ್‌ನಿಂದ ಹಿಂತಿರುಗಿ ಬರುತ್ತಿದ್ದ ಬಸ್ ಹುಬೈ ಪ್ರಾಂತ್ಯದ ರೈಲ್ವೆ ಸುರಂಗಮಾರ್ಗ ನಿರ್ಮಾಣ ಪ್ರದೇಶದ ಬಳಿ ಭೂಕುಸಿತದಿಂದ ಉಂಟಾದ ಅವಶೇಷಗಳಡಿ ಸಿಕ್ಕಿ ನಜ್ಜುಗುಜ್ಜಾಯಿತೆಂದು ಹೇಳಲಾಗಿದೆ. ಈ ದುರಂತದಲ್ಲಿ ಕಾರ್ಮಿಕನೊಬ್ಬ ಸತ್ತಿದ್ದು ಇನ್ನೊಬ್ಬ ಗಾಯಗೊಂಡಿದ್ದಾನೆ. ಭೂಕುಸಿತದಿಂದ ಶಾಂಗಾಯ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶವನ್ನು ಸಂರ್ಪಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಶೇಷವನ್ನು ಉಳಿಸಿದೆ ಎಂದು ವರದಿ ತಿಳಿಸಿದೆ.
|