ಇರಾನ್ ಪರಮಾಣು ಕಾರ್ಯಕ್ರಮದ ಬಗ್ಗೆ ವಿಶ್ವಾಸ ಹುಟ್ಟಿಸುವ ಕೆಲಸವನ್ನು ಸಾಕಷ್ಟು ಮಾಡಿಲ್ಲ ಎಂದು ಅಮೆರಿಕ ಮತ್ತು ಮೂರು ಯೂರೋಪಿಯನ್ ಮಿತ್ರ ರಾಷ್ಟ್ರಗಳು ಆರೋಪಿಸಿದ್ದು, ಇರಾನ್ ವಿರುದ್ಧ ಕಠಿಣ ದಿಗ್ಬಂಧನ ಹೇರುವಂತೆ ವಿಶ್ವಸಂಸ್ಥೆಗೆ ಅವು ಆಗ್ರಹಿಸಿವೆ. ಇರಾನ್ ವಿಷಯಕ್ಕೆ ಸಂಬಂಧಪಟ್ಟಂತೆ ಕಾದು ನೋಡುವ ನೀತಿಯನ್ನು ಅನುಸರಿಸಬಾರದು ಎಂದು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಆಯೋಗದ ಗವರ್ನರ್‌ಗಳಿಗೆ ಸೂಚಿಸಿದೆ.
ಈ ವರ್ಷಾಂತ್ಯದೊಳಗೆ ತನ್ನ ಪರಮಾಣು ಇತಿಹಾಸವನ್ನು ಕುರಿತ ಪ್ರಶ್ನೆಗಳಿಗೆ ಇರಾನ್ ಉತ್ತರ ನೀಡುವಂತೆ ಕಾಣುತ್ತಿದೆಯೆಂದು ಆಯೋಗದ ಮುಖ್ಯಸ್ಥರು ಹೇಳಿದ ಬಳಿಕ ಈ ಪ್ರತಿಕ್ರಿಯೆ ಹೊರಬಿದ್ದಿದೆ.ಇರಾನ್ ರಹಸ್ಯವಾಗಿ ಪರಮಾಣು ಬಾಂಬ್‌ಗಳನ್ನು ತಯಾರಿಸುತ್ತಿದೆಯೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಶಂಕಿಸಿವೆ.
ಆದರೆ ತಮಗೆ ಯುರೇನಿಂಯ ಸಂಸ್ಕರಣೆಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವುದಾಗಿ ಇರಾನ್ ಹೇಳುತ್ತಿದೆ. ಇರಾನ್ ಸರಿಯಾದ ಮಾರ್ಗದಲ್ಲಿ ಕೆಲವು ಹೆಜ್ಜೆಗಳನ್ನು ತೆಗೆದುಕೊಂಡಿದೆ.ಆದರೆ ಇರಾನ್ ಆಂಶಿಕ ಸಹಕಾರ ನೀಡುತ್ತಿದ್ದು, ಫಲಿತಾಂಶ ಪ್ರೋತ್ಸಾಹಕಾರಿಯಾಗಿಲ್ಲ ಎಂದು ಇಯು-3 ರಾಷ್ಟ್ರಗಳು ತಿಳಿಸಿವೆ.
|