ಗಡಿ ಪಾರು ಆಗಿರುವ ಮಾಜಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಬರುವ ರವಿವಾರ ಲಾಹೋರ್‌ಗೆ ಬಂದಿಳಿಯುವ ಮೂಲಕ ಪಾಕಿಸ್ತಾನಕ್ಕೆ ತಮ್ಮ ಸಹೋದರನೊಂದಿಗೆ ಆಗಮಿಸಲಿದ್ದಾರೆ ಎಂದು ಪಾಕಿಸ್ತಾನ ಮುಸ್ಲೀಮ್ ಲೀಗ್ (ನವಾಜ್ ಬಣ)ದ ಮೂಲಗಳು ಖಚಿತಪಡಿಸಿವೆ.
ಶುಕ್ರವಾರ ಸೌದಿ ಅರೇಬಿಯಾದ ಅರಸು ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ ಅವರನ್ನು ರಿಯಾದ್ ನಗರದಲ್ಲಿ ಬೇಟಿಯಾದ ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳುವ ತಮ್ಮ ಮನದ ಇಂಗೀತವನ್ನು ವ್ಯಕ್ತಪಡಿಸಿ ಅದೇ ದಿನದ ಸಾಯಂಕಾಲ ಪುನಃ ಸೌದಿ ಅರೇಬಿಯಾಗೆ ಮರಳುವುದಾಗಿ ಹೇಳಿದ್ದಾರೆ.
ನವಾಜ್ ಷರೀಫ್ ಅವರೊಂದಿಗೆ ಲಂಡನ್ ನಗರದಲ್ಲಿ ಇರುವ ಶಹಾಬಾಜ್ ಷರೀಫ್ ಅವರು ಕೂಡ ಪಾಕಿಸ್ತಾನಕ್ಕೆ ತೆರಳಲಿದ್ದು, ಮೊದಲು ಲಂಡನ್‌ನಿಂದ ರಿಯಾದ್‌ಗೆ ಅವರು ಆಗಮಿಸಲಿದ್ದಾರೆ.
ನವಾಜ್ ಷರೀಫ್ ಅವರು ಈಗಾಗಲೇ ತನ್ನ ಪಕ್ಷದ ಅಬ್ಯರ್ಥಿಗಳಿಗೆ ತಾನು ಪಾಕಿಸ್ತಾನಕ್ಕೆ ಬರುವವರೆಗೆ ಚುನಾವಣೆಗೆ ನಾಮಪತ್ರ ಸಲ್ಲಿಸಕೂಡದು ಎಂದು ಸೂಚಿಸಿದ್ದು, ಜನೆವರಿ 8. 2008ರಲ್ಲಿ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನವೆಂಬರ್ 26 ಅಂತಿಮ ದಿನವಾಗಿದೆ.
ಪಾಕಿಸ್ತಾನದಲ್ಲಿ ಇರುವ ಪಿಎಂಎಲ್ ನಾಯಕರು ನವಾಜ್ ಷರೀಫ್, ಶಹಾಬಾಜ್ ಷರೀಫ್ ಮತ್ತು ಅವರ ಪತ್ನಿ ಕುಲ್ಸೂಮ್ ಅವರ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾಮಪತ್ರಗಳನ್ನು ಪಡೆದುಕೊಂಡಿದ್ದಾರೆ. ಜನೆವರಿ ಎಂಟರಂದು ನಡೆಯಲಿರುವ ಚುನಾವಣೆಗಳನ್ನು ಬಹಿಷ್ಕರಿಸುವ ಕುರಿತಂತೆ ಶನಿವಾರ ಪಕ್ಷದ ಕೇಂದ್ರ ಕಾರ್ಯಕಾರಿಣಿಯ ಸಭೆ ನಡೆಯಲಿದೆ ಎಂದು ಪಕ್ಷದ ವಕ್ತಾರ ಅಹಸಾನ್ ಇಕ್ಬಾಲ್ ಅವರು ಹೇಳಿದ್ದಾರೆ.
|