ತಮಿಳು ರಾಷ್ಟ್ರೀಯ ಆಂದೋಳನದ ನಾಯಕ ಪಿ. ನೆಡುಮಾರನ್ ಅವರು ತಮಿಳು ಈಳಂನ ಹುತಾತ್ಮ ನಾಯಕರ ಸ್ಮರಣಾರ್ಥ ಏರ್ಪಡಿಸಿರುವ ಸಮಾರಂಭದಲ್ಲಿ ಭಾಗವಹಿಸಲು ಮುಂದಿನ ವಾರ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಲಿದ್ದಾರೆ. ತಮಿಳು ನಾಡು ವಿಧಾನಸಭೆಯ ಸದಸ್ಯರಾಗಿರುವ ನೆಡುಮಾರನ್ ದಕ್ಷಿಣ ಆಫ್ರಿಕದ ಡರ್ಬನ್ ಮತ್ತು ಜೋಹಾನ್ಸ್‌ಬರ್ಗ್‌ನ ತಮಿಳು ಸಮನ್ವಯ ಸಮಿತಿ ಮತ್ತು ಇತರೆ ತಮಿಳು ಸಂಘಟನೆಗಳಿಗೆ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹೀರೋ ಡೆ ಸ್ಮರಣಾರ್ಥ ಸಮಾರಂಭದಲ್ಲಿ ನೆಡುಮಾರನ್ ಮುಖ್ಯ ಅತಿಥಿ ಭಾಷಣಕಾರರಾಗಲಿದ್ದಾರೆ ಎಂದು ಸಮನ್ವಯ ಸಮಿತಿಯ ವಕ್ತಾರೆ ತಂಗಂ ಜೋಗಿಯಣ್ಣ ತಿಳಿಸಿದರು. ಶ್ರೀಲಂಕಾದಲ್ಲಿ ತಮಿಳರ ಧ್ಯೇಯೋದ್ದೇಶಗಳಿಗೆ ದಕ್ಷಿಣ ಆಫ್ರಿಕದ ತಮಿಳರು ಪೂರ್ಣ ಬೆಂಬಲ ನೀಡುವರೆಂದು ಅವರು ನುಡಿದರು.
ಉನ್ನತ ರಾಜಕಾರಣಿಯಾಗಿರುವ ನೆಡುಮಾರನ್ ವಿಶ್ವ ತಮಿಳು ಒಕ್ಕೂಟ ಮತ್ತು ತಮಿಳು ಈಳಂ ವಿಮೋಚನೆ ಬೆಂಬಲಿಗರ ಸಮನ್ವಯ ಸಮಿತಿಯ ಸಂಚಾಲಕರು ಕೂಡ ಆಗಿದ್ದಾರೆ. ಶ್ರೀಲಂಕಾದ ತಮಿಳರ ಸ್ವಾತಂತ್ರ್ಯಕ್ಕೆ ನಾವು ಹೇಗೆ ಕೊಡುಗೆ ನೀಡಬಹುದೆಂದು ಅವರಿಂದ ತಿಳಿಯಲು ಬಯಸುವುದಾಗಿ ವಕ್ತಾರೆ ತಿಳಿಸಿದರು.
ಕಳೆದ ನ.12ರಂದು ಎಲ್‌ಟಿಟಿಇಯ ರಾಜಕೀಯ ವಿಭಾಗದ ಕಾರ್ಯದರ್ಶಿ ತಮಿಳುಸೆಲ್ವಂ ಅವರ ಸಾವಿಗೆ ಸಂತಾಪ ಸೂಚಿಸಲು ಚೆನ್ನೈನಲ್ಲಿ ರಾಲಿ ಹಮ್ಮಿಕೊಂಡ ನೆಡುಮಾರನ್ ಮತ್ತು ಎಂಡಿಎಂಕೆ ನಾಯಕ ವೈಕೊ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
|