ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಬಿಗಿ ಭದ್ರತೆಯ ಮಿಲಿಟರಿ ಕಚೇರಿಗಳ ಬಳಿ ಅವಳಿ ಆತ್ಮಹತ್ಯೆ ಬಾಂಬ್ ಸ್ಫೋಟಗಳಲ್ಲಿ ಶನಿವಾರ ಕನಿಷ್ಠ 25 ಮಂದಿ ಬಲಿಯಾಗಿದ್ದಾರೆ. ಮೊದಲ ದಾಳಿಯಲ್ಲಿ ಸೇನಾ ಜನರಲ್ ಮುಖ್ಯಕಚೇರಿಯ ಗೇಟ್ ಹತ್ತಿರದ ಚೌಕಿಗೆ ಆತ್ಮಹತ್ಯೆ ಬಾಂಬರ್ ತನ್ನ ಕಾರನ್ನು ಡಿಕ್ಕಿ ಹೊಡೆಸಿದಾಗ ಒಬ್ಬ ಸೈನಿಕ ಬಲಿಯಾಗಿದ್ದಾನೆ ಎಂದು ಮಿಲಿಟರಿ ವಕ್ತಾರ ಮೇ. ಜನರಲ್ ವಹೀದ್ ಅರ್ಷದ್ ತಿಳಿಸಿದರು.
ಎರಡನೇ ಸ್ಫೋಟವು ಓಜ್ರಿ ಕ್ಯಾಂಪ್‌ನ ಗೇಟ್ ಸಮೀಪದಲ್ಲಿ ಸಂಭವಿಸಿದ್ದು, ಕಾರಿನಲ್ಲಿದ್ದ ಆತ್ಮಹತ್ಯೆ ಬಾಂಬರ್ ರಕ್ಷಣಾ ಸಿಬ್ಬಂದಿ ಖಾತೆಯ ನೌಕರರನ್ನು ಒಯ್ಯುತ್ತಿದ್ದ ಬಸ್ಸಿನ ಹಿಂಭಾಗಕ್ಕೆ ಕಾರನ್ನು ಅಪ್ಪಳಿಸಿದ ಎಂದು ಹೇಳಿದ ಅವರು ಈ ಘಟನೆಯಲ್ಲಿ 14 ಮಂದಿ ಬಲಿಯಾಗಿದ್ದಾರೆಂದು ತಿಳಿಸಿದರು.
ಜನರಲ್ ಮುಖ್ಯಕಚೇರಿಯಲ್ಲಿ ಮುಖ್ಯ ಸಿಬ್ಬಂದಿ ಅಧಿಕಾರಿಗಳು ಸೇರಿದಂತೆ ಉನ್ನತ ಸೇನಾ ಜನರಲ್‌ಗಳ ಕಚೇರಿಗಳಿವೆ. ಓಜ್ರಿ ಕ್ಯಾಂಪ್ ರಕ್ಷಣಾ ಸಚಿವಾಲಯದ ನೆಲೆ ಹೊಂದಿದೆ. ಕಳೆದ ನ.1ರಂದು ಪಂಜಾಬ್‌ನ ಸಾರ್‌ಗೋಧಾ ವಾಯುನೆಲೆ ಬಳಿ ಪಾಕಿಸ್ತಾನದ ವಾಯುದಳದ ಸಿಬ್ಬಂದಿಯನ್ನು ಒಯ್ಯುತ್ತಿದ್ದ ಬಸ್ಸಿಗೆ ಆತ್ಮಹತ್ಯೆ ದಾಳಿಕೋರನು ತನ್ನ ಮೋಟರ್ ಸೈಕಲ್ ಅಪ್ಪಳಿಸಿದಾಗ ಕನಿಷ್ಠ 11 ಜನರು ಸತ್ತಿದ್ದರು.
|