ತಮ್ಮ ಸಹೋದರ ಶಹಾಬಾಜ್ ಮತ್ತು ಕುಟುಂಬದ ಸದಸ್ಯರೊಂದಿಗೆ ಲಾಹೋರ್ ನಗರಕ್ಕೆ ಬಂದಿಳಿದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ತಮ್ಮ ಏಳು ವರ್ಷಗಳ ಗಡಿಪಾರಿನ ವನವಾಸನ್ನು ಅಂತ್ಯಗೊಳಿಸಿ, ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಸಂಸತ್ತಿನ ಚುನಾವಣೆಗೆ ಸೋಮವಾರ ತಮ್ಮ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ರಾಜಕೀಯ ವನವಾಸಕ್ಕೆ ಮಂಗಳ ಹಾಡಲಿದ್ದಾರೆ.
ಮೇದಿನಾ ನಗರದಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ನವಾಜ್ ಷರೀಫ್ ಅವರನ್ನು ಸಾವಿರಾರು ಸಂಖ್ಯೆಯಲ್ಲಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ನವಾಜ್ ಮತ್ತು ಅವರ ಕುಟುಂಬವನ್ನು ಸ್ವಾಗತಿಸಿದರು.
ವರದಿಗಳ ಪ್ರಕಾರ ನವಾಜ್ ಷರೀಫ್ ಅವರು ಮೊದಲು ದಾತಾ ದರ್ಬಾಕ್ಕೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಲಾಹೋರ್ ನಗರದ ತುಂಬ ಬಿಗಿ ಬಂದೋಬಸ್ತ್ ಮಾಡಲಾಗಿದೆ ಅದರಲ್ಲಿಯೂ ವಿಮಾನ ನಿಲ್ದಾಣದ ರಸ್ತೆಯ ಮೇಲೆ ವಿಶೇಷ ನಿಗಾ ಇಡಲಾಗಿದೆ.
ಇದೇ ಸಮಯದಲ್ಲಿ ಮುಷರಫ್ ಸರಕಾರ ರಾಜಕೀಯ ಬಂಧನವನ್ನು ಮುಂದುವರಿಸಿದ್ದು, ಕಳೆದ ರಾತ್ರಿಯಿಂದ ಈಚೆಗೆ. ಸುಮಾರು 1800 ಪಿಎಂಎಲ್ ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಪಿಎಂಎಲ್ ವಕ್ತಾರ ಅಹಸಾನ್ ಇಕ್ಬಾಲ್ ಅವರು ಹೇಳಿದ್ದಾರೆ. ಇಂದು ಭುಟ್ಟೊ ನಾಮಪತ್ರ ಸಲ್ಲಿಕೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು ರವಿವಾರ ಜನವರಿ ಎಂಟರಂದು ಜರುಗಲಿರುವ ಸಂಸತ್ತಿನ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದ್ದು, ಅವರ ಪ್ರತಿಸ್ಪರ್ಧಿ ಪಾಕಿಸ್ತಾನ ಮುಸ್ಲೀಂ ಲೀಗ್ ಅದ್ಯಕ್ಷ ನವಾಜ್ ಷರೀಫ್ ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
|