ತನ್ನ ಚೊಚ್ಚಲ ಚಂದ್ರ ಯಾನ ನೌಕೆ ಚಾಂಗ್-1ನಿಂದ ಚಂದ್ರನ ಮೇಲ್ಮೈ ಚಿತ್ರವನ್ನು ಚೀನ ಸೋಮವಾರ ಪ್ರಕಟಿಸುವ ಮೂಲಕ ದೂರ ಬಾಹ್ಯಾಕಾಶದ ಶೋಧನೆಯಲ್ಲಿ ತನ್ನ ನೈಪುಣ್ಯವನ್ನು ಪ್ರದರ್ಶಿಸಿದೆ. ಚಂದ್ರನಲ್ಲಿ ಸಣ್ಣ ಮತ್ತು ದೊಡ್ಡ ಕುಳಿಗಳಿರುವ ಕಡಿದಾದ ಮೇಲ್ಮೈ ಪ್ರದೇಶದ ಕಪ್ಪು ಮತ್ತು ಬಿಳುಪಿನ ಚಿತ್ರಗಳನ್ನು ಚೀನದ ಪ್ರಧಾನಮಂತ್ರಿ ವೆನ್ ಜಿಯಾಬೊ ಬಿಡುಗಡೆ ಮಾಡಿದರು.
ಚಂದ್ರಯಾತ್ರೆ ಮಾಡುವ ಚೀನದ ಜನರ ಶತಮಾನದ ಹಿಂದಿನ ಕನಸು ಈಗ ವಾಸ್ತವರೂಪ ಪಡೆದುಕೊಳ್ಳುತ್ತಿದೆ ಎಂದು ಜಿಯಾಬೊ ತಮ್ಮ ಹೃದಯಸ್ಪರ್ಶಿ ಭಾಷಣದಲ್ಲಿ ಹೇಳಿದರು. ಆಳ ಬಾಹ್ಯಾಕಾಶದ ಶೋಧನೆಯ ಸಾಮರ್ಥ್ಯಗಳನ್ನು ಹೊಂದಿದ ಕೆಲವೇ ರಾಷ್ಟ್ರಗಳ ಸಾಲಿಗೆ ಚೀನ ಸೇರಿದ್ದು ಹೆಮ್ಮೆಯೆನಿಸಿದೆ ಎಂದು ಬೀಜಿಂಗ್ ಏರೋಸ್ಪೇಸ್ ನಿಯಂತ್ರಣ ಕೇಂದ್ರದಲ್ಲಿ ಅವರು ತಿಳಿಸಿದರು.
460 ಕಿಮೀ ಉದ್ದ ಮತ್ತು 280 ಕಿಮೀ ಅಗಲದ ವ್ಯಾಪ್ತಿಯನ್ನು ಸೆರೆಹಿಡಿದಿರುವ ಈ ಚಿತ್ರವು ದಕ್ಷಿಣ ಅಕ್ಷಾಂಕ್ಷಕ್ಕೆ 54 ಡಿಗ್ರಿ ಮತ್ತು ಪೂರ್ವ ರೇಖಾಂಶಕ್ಕೆ 83ರಿಂದ 57 ಡಿಗ್ರಿ ಸ್ಥಳದಲ್ಲಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ತಿಳಿಸಿದೆ.
|