ಸೂಡಾನ್‌ನಲ್ಲಿ ಟೆಡ್ಡಿ ಬಿಯರ್ ಗೊಂಬೆಗೆ ಮೊಹಮದ್ ಎಂದು ಹೆಸರಿಡಲು ತನ್ನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಬ್ರಿಟಿಷ್ ಶಿಕ್ಷಕಿಯೊಬ್ಬರಿಗೆ 40 ಛಡಿಯೇಟಿನ ಶಿಕ್ಷೆ ಕಾದಿದೆ. ಸೂಡನ್ ರಾಜಧಾನಿ ಕಾರ್ಟೌಮ್‌ನ ಯುನಿಟಿ ಹೈಸ್ಕೂಲ್‌ನ ಯೋಜನೆಯೊಂದರ ಭಾಗವಾಗಿ ಟೆಡ್ಡಿ ಬಿಯರ್ ಗೊಂಬೆಗೆ ಹೆಸರಿಡುವಂತೆ ಲಿವರ್‌ಪೂಲ್ ಶಿಕ್ಷಕಿ ತನ್ನ ತರಗತಿಯ 7 ವರ್ಷದ ಮಕ್ಕಳಿಗೆ ಅವಕಾಶ ನೀಡಿದರು.
ಆದರೆ ಟೆಡ್ಡಿಗೆ ಮೊಹಮದ್ ಎಂದು ನಾಮಾಂಕಿತ ಮಾಡಿದ ಬಳಿಕ ಪೊಲೀಸರಿಂದ ಕರೆ ಬಂದು ತಾವು ಮುಸ್ಲಿಂನ ಕಠಿಣ ಶರಿಯಾ ಕಾನೂನಿನ ಅನ್ವಯ ನಿರ್ದಯ ಛಡಿಯೇಟಿನ ಶಿಕ್ಷೆ ಎದುರಿಸಬೇಕಾಗುತ್ತದೆಂದು ತಿಳಿದಾಗ ಅವರು ತೀವ್ರವಾಗಿ ನೊಂದುಕೊಂಡರೆಂದು ಹೇಳಲಾಗಿದೆ. ಪೊಲೀಸರು 12 ಇಂಚುಗಳ ಉದ್ದದ ಕಂದುಬಣ್ಣದ ಟೆಡ್ಡಿಬಿಯರ್ ಗೊಂಬೆಯನ್ನು ಮೊಹಮದ್ ಹೆಸರನ್ನು ಬರೆದಿರುವ ಬ್ಯಾಡ್ಜ್‌ನೊಂದಿಗೆ ಸಾಕ್ಷಿ ಸಲುವಾಗಿ ವಶಪಡಿಸಿಕೊಂಡಿದ್ದಾರೆ.
ಶಿಕ್ಷಕಿ ಗಿಲಿಯನ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸ್ ಠಾಣೆಯ ಹೊರಗೆ ಕೆಲವು ಉದ್ರಿಕ್ತ ಯುವಕರು ಗುಂಪುಸೇರಿ ಆಕೆಯ ವರ್ತನೆಗೆ ಪ್ರತಿಭಟನೆ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ಲಿವರ್‌ಪೂಲ್ ಡೊವ್‌ಕಾಟ್ ಪ್ರಾಥಮಿಕ ಶಾಲೆಯ ಉಪಮುಖ್ಯಸ್ಥರಾಗಿದ್ದ ಶಿಕ್ಷಕಿ ಎರಡು ತಿಂಗಳ ಕೆಳಗೆ ಕಾರ್ಟೌಮ್‌ನಲ್ಲಿ ಎರಡು ವರ್ಷಗಳ ಕೆಲಸಕ್ಕೆ ನಿಯೋಜಿತರಾಗಿದ್ದರು.
ಶಾಲೆಯ ಆಡಳಿತ ವರ್ಗವು ಗಿಲಿಯನ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಮಕ್ಕಳು ಬಹಳವಾಗಿ ಪ್ರೀತಿಸುತ್ತಾರೆಂದು ಹೇಳಿದೆ. ಇಸ್ಲಾಂ ಧರ್ಮಕ್ಕೆ ಕಳಂಕ ಉಂಟುಮಾಡಲು ಗಿಲಿಯನ್ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದೂ ಶಾಲೆಯ ಸಿಬ್ಬಂದಿ ಹೇಳಿದ್ದಾರೆ.
|