ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆಯಾದರೆ ಸಮವಸ್ತ್ರ ತ್ಯಜಿಸುವುದಾಗಿ ಜನರಲ್ ಪರ್ವೇಜ್ ಮುಷರ್ರಫ್ ನೀಡಿದ್ದ ಆಶ್ವಾಸನೆಯಂತೆ ಬುಧವಾರ ಅಂತಿಮವಾಗಿ ಸೇನಾ ಮುಖ್ಯಸ್ಥರ ಹುದ್ದೆಯಿಂದ ಕೆಳಗಿಳಿದರು.
ರಾವಲ್ಪಿಂಡಿಯ ಸೇನಾ ಮುಖ್ಯಕಚೇರಿಯಲ್ಲಿ ಅಂತಿಮ ಗೌರವವಂದನೆ ಸ್ವೀಕರಿಸಿದ ಬಳಿಕ, "46 ವರ್ಷಗಳ ಕಾಲ ಸೇವೆಯ ಬಳಿಕ ಸೇನೆಯನ್ನು ತ್ಯಜಿಸುತ್ತಿರುವುದರಿಂದ ನನ್ನ ಭಾವನೆಗಳನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಸೇನೆಯ ಎಲ್ಲ ಸ್ತರದ ಸಿಬ್ಬಂದಿಗೆ ಅವರು ನೀಡಿದ ಪ್ರಶ್ನಾತೀತ ಬೆಂಬಲ ಮತ್ತು ನಿಷ್ಠೆಗೆ ನನ್ನ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಭಾರಪರವಶತೆಯಿಂದ ಮುಷರ್ರಫ್ ನುಡಿದರು.
ಸುದೀರ್ಘ ಸೇವೆ ಸಲ್ಲಿಸಿದ ಎರಡನೇ ಸೇನಾ ಮುಖ್ಯಸ್ಥ ಎಂಬ ಅಪರೂಪದ ಮನ್ನಣೆಗೆ ಪಾತ್ರರಾಗಿರುವ ಮುಷರ್ರಫ್ ತಮ್ಮ ನಿಷ್ಠರಾದ ಜನರಲ್ ಅಶ್ಫಕ್ ಕಿಯಾನಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ ಮತ್ತು ಗುರುವಾರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಜನರಲ್ ಕಿಯಾನಿ ಅವರನ್ನು ನಾನು ಕಳೆದ 20 ವರ್ಷದಿಂದ ಬಲ್ಲೆ.ಅವರು ಸೇನೆಯನ್ನು ಉಚ್ಚಸ್ಥಾನಕ್ಕೆ ಒಯ್ಯುವ ಸಾಮರ್ಥ್ಯ ಹೊಂದಿದ್ದಾರೆಂದು ಮುಷರ್ರಫ್ ಶ್ಲಾಘಿಸಿದರು.
ಉರ್ದುವಿನಲ್ಲಿ ವಿದಾಯ ಭಾಷಣ ಮಾಡಿದ ಅವರು "ಪಾಕಿಸ್ತಾನ ಸೇನೆಯ ತಮ್ಮ ಜೀವ ಮತ್ತು ಭಾವ. ಸೇನೆಗೆ ಸೇರಿದಾಗ ತಮಗೆ ಕೇವಲ 17-18 ವರ್ಷ ವಯಸ್ಸಾಗಿತ್ತು. ಮಿಲಿಟರಿ ಮೂಲಕ ನಾನು ಜೀವನದಲ್ಲಿ ಎಲ್ಲವನ್ನೂ ಸಾಧಿಸಿದೆ" ಎಂದು ಭಾವಪರವಶತೆಯಿಂದ ನುಡಿದರು. "ಇದು ಜೀವನ. ಪ್ರತಿಯೊಂದು ಒಳ್ಳೆಯ ಕೆಲಸ ಅಂತ್ಯವಾದ ಬಳಿಕ ಪ್ರತಿಯೊಬ್ಬರೂ ಮುಂದೆ ಸಾಗಬೇಕು" ಎಂದು ವೇದಾಂತಿಯಂತೆ ನುಡಿದರು. ಎರಡು ಯುದ್ಧಗಳಲ್ಲಿ ಮತ್ತು ಹಲವು ಆಂತರಿಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬಗೆಯನ್ನು ಜನರಲ್ ಸ್ಮರಿಸಿದರು.
ಸಿಯಾಚಿನ್, ಎನ್‌ಡಬ್ಲ್ಯುಎಫ್‌ಪಿ, ಬೆಲೂಚಿಸ್ತಾನ್ ಮತ್ತು ಸಿಂಧ್ ಕಾರ್ಯಾಚರಣೆಯಲ್ಲಿ ಸೇನೆಯ ಪಾತ್ರವನ್ನು ಅವರು ಶ್ಲಾಘಿಸಿದರು. ಬಾಹ್ಯ ದಾಳಿಗಳು ಅಥವಾ ಆಂತರಿಕ ಆಕ್ರಮಣವಾಗಿರಲಿ ಹೋರಾಟದಲ್ಲಿ ಸೇನೆ ಸದಾ ಮುಂಚೂಣಿ ಪಾತ್ರ ವಹಿಸಿತು ಎಂದು ನುಡಿದ ಅವರು ಹಲವಾರು ಸವಾಲಿನ ಕಾರ್ಯಗಳನ್ನು ಎದುರಿಸಿದ ಸೇನೆ ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ ಎಂದು ಹೇಳಿದರು.
|