ಶ್ರೀಲಂಕಾದ ವಾಯುಪಡೆ ಬುಧವಾರ ಎಲ್‌ಟಿಟಿಇಯ ವಾಯ್ಸ್ ಆಫ್ ಟೈಗರ್ಸ್ ರೇಡಿಯೊ ನೆಲೆಯನ್ನು ಕಿಲಿನೋಚಿಯಲ್ಲಿ ನಾಶ ಮಾಡಿದೆ. ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ತನ್ನ ವಾರ್ಷಿಕ ಭಾಷಣ ಮಾಡಿದ ಒಂದು ಗಂಟೆಯ ಬಳಿಕ ರೇಡಿಯೊ ಕೇಂದ್ರವನ್ನು ನಾಶ ಮಾಡಲಾಯಿತು ಎಂದು ಯುದ್ಧವಿಮಾನದ ಪೈಲಟ್‌ಗಳು ಖಚಿತಪಡಿಸಿದರು.
ರೇಡಿಯೊ ಕೇಂದ್ರವು ಪ್ರಭಾಕರನ್ ಅವರ ಹುಟ್ಟುಹಬ್ಬದ ಭಾಷಣವನ್ನು ಸಂಜೆ ಪ್ರಸಾರ ಮಾಡುವಷ್ಟರಲ್ಲಿ ಅದನ್ನು ನಾಶಪಡಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ. ಎಲ್‌ಟಿಟಿಇ ತನ್ನ ಪ್ರಚಾರ ಸಾಮಗ್ರಿಗಳನ್ನು ಈ ಸ್ಥಳದಲ್ಲಿ ಉತ್ಪಾದಿಸುವ ಮೂಲಕ ತಮಿಳು ಯುವಕರಿಗೆ ಸಂಘಟನೆಗೆ ಸೇರುವಂತೆ ಆಮಿಷ ಒಡ್ಡುತ್ತಿತ್ತಲ್ಲದೇ ಶ್ರೀಲಂಕಾದ ವರ್ಚಸ್ಸಿಗೆ ಹಾನಿ ಉಂಟುಮಾಡುತ್ತಿತ್ತು ಎಂದು ಅದು ತಿಳಿಸಿದೆ.
ಎಲ್‌ಟಿಟಿಇ ಶಾಂತಿ ಕಾರ್ಯಾಲಯ ಹೇಳಿಕೆಯೊಂದರಲ್ಲಿ ಕಿಲ್ಲಿನೋಚಿಗೆ 3.5 ಕಿಮೀ ದೂರವಿರುವ ವಾಯ್ಸ್ ಆಫ್ ಟೈಗರ್ಸ್ ಕಟ್ಟಡಕ್ಕೆ ಶ್ರೀಲಂಕಾ ವಾಯುಪಡೆ ಬಾಂಬ್ ದಾಳಿ ಮಾಡಿದ್ದು, ಅನೇಕ ನೌಕರರು ಸತ್ತಿದ್ದಾರೆಂದು ತಿಳಿಸಿದೆ. ಬಾಂಬ್ ದಾಳಿಯಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಾಗರೀಕರು ಕೂಡ ಸತ್ತಿದ್ದಾರೆಂದು ಬಂಡುಕೋರರು ತಿಳಿಸಿದ್ದಾರೆ.
|