ಜನೆವರಿ 8ರಂದು ನಡೆಯಲಿರುವ ಪಾಕಿಸ್ತಾನ್ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೇ? ಅಥವಾ ಚುನಾವಣೆಯನ್ನು ಬಹಿಷ್ಕರಿಸಬೇಕೆ? ಎನ್ನುವ ನಿಟ್ಟಿನಲ್ಲಿ, ಸೋಮವಾರ ಪ್ರಮುಖ ವಿರೋಧ ಪಕ್ಷಗಳು ತಮ್ಮ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿವೆ.
ಎರಡು ಪ್ರಮುಖ ವಿರೋಧ ಪಕ್ಷಗಳಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ನೇತೃತ್ವದ ಪಾಕಿಸ್ತಾನ್ ಪಿಪಲ್ಸ್ ಪಾರ್ಟಿ ಮತ್ತು ನವಾಜ್ ಶರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷಗಳು ಸೋಮವಾರ ರಾಜಧಾನಿಯಲ್ಲಿ ಸಭೆ ಸೇರಿ ಈ ಕುರಿತು ಮಹತ್ವದ ನಿರ್ಧಾರವನ್ನು ಪ್ರಕಟಿಸಲಿವೆ.
ಆ ಮಧ್ಯೆ, ಅಪರಾಧ ಪ್ರಕರಣ ಇತ್ಯರ್ಥವಾಗದ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ನವಾಜ್ ಅವರ ಸಹೋದರ ಶಹಭಾಜ್ ಶರೀಫ್ ಅವರ ಉಮೇದುವಾರಿಕೆ ನಾಮಪತ್ರ ತಿರಸ್ಕೃತಗೊಂಡಿದ್ದು, ಪಿಎಂಎಲ್-ಎನ್ ಪಕ್ಷಕ್ಕೆ ಹಿನ್ನಡೆಯುಂಟಾಗಿದೆ.
ಆದರೆ, ಈ ನಾಮಪತ್ರ ತಿರಸ್ಕೃತಗೊಳ್ಳುವಿಕೆ ಉದ್ದೇಶಪೂರ್ವಕವಾಗಿದ್ದು, ತಮ್ಮನ್ನು ಮಲೆಗೂಂಪಾಗಿಸುವ ಸಲುವಾಗಿ ಇದರಲ್ಲಿ ರಾಜಕೀಯ ಬೆರೆಸಲಾಗಿದೆ ಎಂದು ಶಹಬಾಜ್ ಆರೋಪಿಸಿದ್ದಾರೆ.
ಈ ಮದ್ಯೆ, ಪೇಶಾವರದಲ್ಲಿ ತಮ್ಮ ಚುನಾವಣೆ ಪ್ರಚಾರ ಮುಗಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭುಟ್ಟೊ, ನಾವು ಚುನಾವಣೆಯನ್ನು ಬಹಿಷ್ಕರಿಸಿದರೆ, ಅಧ್ಯಕ್ಷ ಮುಷರಫ್ ಅವರು ಮತ್ತಷ್ಟು ಬಲಿಷ್ಠಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ, ನಾವು ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ವಿಚಾರದೆಡೆಗೆ ವಾಲುತ್ತೇವೆ. ಆದಾಗ್ಯೂ, ಬಹಿಷ್ಕಾರದ ಬಾಗಿಲೀನ್ನೂ ಮುಚ್ಚಿಲ್ಲವೆಂದವರು ಪ್ರತಿಕ್ರಿಯಿಸಿದ್ದಾರೆ.
|