ರಷ್ಯಾದ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ "ದಿ ಯುನೈಟೆಡ್ ರಷ್ಯಾ"ಪಕ್ಷ ಜಯಭೇರಿ ಭಾರಿಸಿದೆ ಎಂದು ರಷ್ಯಾದ ಮುಖ್ಯ ಚುನಾವಣಾ ಆಯುಕ್ತ ವ್ಲಾಡಿಮಿರ್ ಚುರೋವ್ ತಿಳಿಸಿದ್ದಾರೆ.
ದೇಶಾದ್ಯಂತ ಭಾನುವಾರ ನಡೆದ ಚುನಾವಣಾ ಮತಎಣಿಕೆ ಕಾರ್ಯ ಶೇಕಡಾ 30.2ರಷ್ಟು ಪೂರ್ಣಗೊಂಡಿದ್ದು, ಇದರಲ್ಲಿ ಶೇಕಡಾ 63.6ರಷ್ಟು ಮತಗಳನ್ನು ಪಡೆಯುವ ಮೂಲಕ "ದಿ ಯುನೈಟೆಡ್ ರಷ್ಯಾ" ಪಕ್ಷ ಬಹುಮತ ಪಡೆದುಕೊಂಡಿದೆ ಎಂದವರು ಘೋಷಿಸಿದ್ದಾರೆ.
ಇದೇವೇಳೆ ಈ ಪಕ್ಷಕ್ಕೆ ತೀವ್ರ ಪೈಪೋಟಿ ಒಡ್ಡಿದ್ದ "ಕಮ್ಯೂನಿಸ್ಟ್ ಪಾರ್ಟಿ" ಶೇಕಡಾ 11.3ರಷ್ಟು, "ಲಿಬರಲ್ ಡೆಮಾಕ್ರೋಟಿಕ್" ಪಕ್ಷ ಶೇಕಡಾ 9.6ರಷ್ಟು ಮತ್ತು "ಜಸ್ಟ್ ರಷ್ಯಾ" ಪಕ್ಷ ಶೇಕಡಾ 7.2ರಷ್ಟು ಸ್ಥಾನಗಳನ್ನು ಪಡೆದುಕೊಂಡಿವೆ ಎಂದವರು ಸುದ್ದಿಗಾರರಿಗೆ ವಿವರ ನೀಡಿದರು.
ಈ ಭಾರಿಯ ಚುನಾವಣೆಯಲ್ಲಿ ಒಟ್ಟು ಶೇಕಡಾ 60ರಷ್ಟು ಮತದಾನವಾಗಿದೆ ಎಂದು ತಿಳಿಸಿದ ಅವರು, 2003ರ ಚುನಾವಣೆಯಲ್ಲಿ ಶೇಕಡಾ 55.75ರಷ್ಟು ಮಾತ್ರ ಮತದಾನವಾಗಿತ್ತೆಂದವರು ಹೇಳಿದರು.
"ದಿ ಯುನೈಟೆಡ್ ರಷ್ಯಾ"ಪಕ್ಷದ ಮುಖ್ಯಸ್ಥ ಬೋರಿಸ್ ಗ್ರೈಸ್ಲೋವ್ ಅವರು ತಮ್ಮ ಪಕ್ಷ ಬಹುಮತ ಪಡೆದುಕೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿ "ಈ ಜನಾಭಿಪ್ರಾಯವು ಪುಟಿನ್ ಅವರಿಗೆ ಸಂದ ಗೌರವ. ಕಾರಣ, ಈ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಅವರೇ ಸಿದ್ಧಪಡಿಸಿದ್ದರು. ಆದ್ದರಿಂದ, ಈ ಎಲ್ಲಾ ಗೌರವ ಅವರಿಗೆ ಸೇರಬೇಕು" ಎಂದು ಭಾವಪರವಶರಾಗಿ ನುಡಿದರು.
|