ಇರಾನ್‌ನಲ್ಲಿ ಮೂರು ಬಾಲಕರ ಮೇಲೆ ಅತ್ಯಾಚಾರ ಮಾಡಿದ 20 ವರ್ಷ ವಯಸ್ಸಿನ ಯುವಕನನ್ನು ಬುಧವಾರ ಗಲ್ಲಿಗೇರಿಸಲಾಗಿದೆ ಎಂದು ಪಾಶ್ಚಿಮಾತ್ಯ ಬಲಪಂಥೀಯ ಸಮೂಹ ಮತ್ತು ಇರಾನ್ ಪತ್ರಿಕೆ ಗುರುವಾರ ತಿಳಿಸಿದೆ. ತನ್ನ 13ನೇ ವಯಸ್ಸಿನಲ್ಲಿ ಮೂರು ಬಾಲಕರ ಮೇಲೆ ಅತ್ಯಾಚಾರ ಮಾಡಿದ ಮಕ್ವಾನ್ ಮೌಲೋಜದೆಯನ್ನು ಕೆರ್ಮಾನ್‌ಶಾದ ಪಶ್ಚಿಮ ಪ್ರಾಂತ್ಯದಲ್ಲಿರುವ ಬಂಧೀಖಾನೆಯಲ್ಲಿ ಗಲ್ಲಿಗೆ ಹಾಕಲಾಯಿತು ಎಂದು ಪತ್ರಿಕೆ ವರದಿ ಮಾಡಿದೆ.
ಯುವಕನ ವಿರುದ್ಧ ದೂರು ನೀಡಿದವರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದು, ಅವನ ಮರಣದಂಡನೆ ಶಿಕ್ಷೆಯನ್ನು ತಪ್ಪಿಸುವಂತೆ ಮಾನವ ಹಕ್ಕುಗಳ ಕಾವಲು ಸಮಿತಿಯು ಇಸ್ಲಾಮಿಕ್ ಗಣರಾಜ್ಯಕ್ಕೆ ಸೂಚಿಸಿತ್ತು. ಆದರೆ ಇಸ್ಲಾಮಿಕ್ ಶರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸುವ ಇರಾನ್‌ನಲ್ಲಿ ಯಾರ ಮಾತಿಗೂ ಬೆಲೆಕೊಡದೇ ಯುವಕನನ್ನು ಗಲ್ಲಿಗೆ ಹಾಕಲಾಯಿತೆಂದು ಹೇಳಲಾಗಿದೆ.
ಯುವಕನನ್ನು ಗಲ್ಲಿಗೇರಿಸಿದ ಬಳಿಕ ಅವನ ಕುಟುಂಬಕ್ಕೆ ಮೃತದೇಹವನ್ನು ತೆಗೆದುಕೊಳ್ಳುವಂತೆ ತಿಳಿಸಲಾಯಿತೆಂದು ತಮಗೆ ಮಾಹಿತಿ ಸಿಕ್ಕಿರುವುದಾಗಿ ಅಮೆರಿಕ ಮೂಲದ ಮಾನವ ಹಕ್ಕುಗಳ ಕಾವಲು ಸಂಸ್ಥೆಯ ಸಂಶೋಧಕಿಯಾದ ಕ್ಲಾರಿಸಾ ಬೆಂಕೊಮೊ ತಿಳಿಸಿದ್ದಾರೆ.
ಈ ಘಟನೆ ತಮ್ಮನ್ನು ತಲ್ಲಣಿಸುವಂತೆ ಮಾಡಿದೆ ಎಂದು ಹೇಳಿದ ಅವರು, ಇರಾನ್ ಅಪರಾಧ ಮಾಡಿದ ಮಕ್ಕಳನ್ನು ಗಲ್ಲಿಗೇರಿಸುವುದರಲ್ಲಿ ಮುನ್ನಡೆ ಸಾಧಿಸಿದೆ ಎಂದು 18 ವರ್ಷಕ್ಕಿಂತ ಕಡಿಮೆ ವಯೋಮಾನದ ಬಾಲಕರನ್ನು ಉಲ್ಲೇಖಿಸಿ ಅವರು ಹೇಳಿದರು.
ಇರಾನ್ ನ್ಯಾಯಾಂಗ ಅಧಿಕಾರಿಗಳು ಪ್ರತಿಕ್ರಿಯಿಸಲು ಸಿಗಲಿಲ್ಲ. ಇರಾನ್ ಉಳಿದ ಮಾಧ್ಯಮಗಳು ಗಲ್ಲುಶಿಕ್ಷೆಯ ವರದಿಗಳನ್ನು ಪ್ರಕಟಿಸಿಲ್ಲ. ಇಸ್ಲಾಮಿಕ್ ಶರಿಯಾ ಕಾನೂನಿನ ಅಡಿಯಲ್ಲಿ ತಾನು ಕ್ರಿಮಿನಲ್‌ಗಳಿಗೆ ಶಿಕ್ಷೆ ವಿಧಿಸುತ್ತಿರುವುದಾಗಿ ಇರಾನ್ ತಿಳಿಸಿದ್ದು, ಮಾನವ ಹಕ್ಕುಗಳ ರಕ್ಷಣೆಯಲ್ಲಿ ಕುಖ್ಯಾತಿಯ ದಾಖಲೆ ನಿರ್ಮಿಸಿದೆಯೆಂಬ ಟೀಕೆಯನ್ನು ಅಲ್ಲಗಳೆದಿದೆ.
|